ಪುಣೆ (ಮಹಾರಾಷ್ಟ್ರ): ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಸ್ಥಳಕ್ಕೆ ಬರಲು ವಿಫಲವಾದ ಕಾರಣ 57 ವರ್ಷದ ಯೇಸುದಾಸ್ ಮೋತಿ ಪ್ರಾನ್ಸೀಸ್ ಎಂಬ ವ್ಯಕ್ತಿ ಮೃತಪಟ್ಟಿರುವ ಘಟನೆ ಪುಣೆಯಲ್ಲಿ ನಡೆದಿದೆ.
ಕಬ್ಬಿಣದ ಸರಳು ಹಾಗೂ ಇತರ ವಸ್ತುಗಳಿಂದ ರಸ್ತೆಗಳನ್ನು ಬಂದ್ ಮಾಡಿದ್ದ ಪರಿಣಾಮ ಆ್ಯಂಬುಲೆನ್ಸ್ ಸರಿಯಾದ ಸಮಯಕ್ಕೆ ಬಾರದಿರುವುದು ಈತನ ಸಾವಿಗೆ ಕಾರಣ ಎನ್ನಲಾಗಿದೆ. ಗುರುವಾರ ತಡರಾತ್ರಿ ನಡೆದಿರುವ ಘಟನೆ ಈಗ ಬೆಳಕಿಗೆ ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯರಾದ ಸುಧೀರ್ ದಾವ್ಲೆ, ಅನಾರೋಗ್ಯಕ್ಕೆ ಒಳಗಾಗಿದ್ದ ಯೇಸುದಾಸ್ ಅವರನ್ನು ಆ್ಯಂಬುಲೆನ್ಸ್ ಗಾಗಿ ಮನೆಯ ಹೊರಗಡೆ ಬಂದು ಚೇರ್ ಮೇಲೆ ಕೂಡಿಸಲಾಗಿತ್ತು. ಆದ್ರೆ ಎಷ್ಟು ಸಮಯ ಆದ್ರೂ ಆ್ಯಂಬುಲೆನ್ಸ್ ಸ್ಥಳಕ್ಕೆ ಬರಲು ಸಾಧ್ಯವಾಗಿಲ್ಲ. ಪೊಲೀಸರಿಗೂ ಮಾಹಿತಿ ನೀಡಲಾಯಿತು. ಕೂಡಲೇ ಬಂದ ಪೊಲೀಸರು ಆ್ಯಂಬುಲೆನ್ಸ್ ಚಾಲಕನನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಫಲ ನೀಡಲಿಲ್ಲ.
ಸ್ಥಳೀಯರೇ ರಸ್ತೆಗೆ ಅಡ್ಡಲಾಗಿ ಹಾಕಿದ್ದ ಶೀಟ್‌ಗಳನ್ನು ತೆರವು ಮಾಡಿ ಟೆಂಪೋ ಮೂಲಕ ಯೇಸು ದಾಸ್ ಅವರನ್ನು ಆಸ್ಪತ್ರೆಗೆ ಸೇರಿಸಿದರಾದರೂ ಆ ವೇಳೆಗೆ ಆತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ಪುಣೆಯಲ್ಲೇ ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಸೌಲಭ್ಯ ಸಿಗದೇ ವ್ಯಕ್ತಿ ಮೃತಪಟ್ಟಿರೋದು ನಿಜಕ್ಕೂ ದುರಂತವೇ ಸರಿ.