ಉತ್ತರ ಪ್ರದೇಶ: ಇಲ್ಲಿನ ಗಾಜಿಯಾಬಾದ್ನ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಉಪಯೋಗಕ್ಕೆ ಬಾರದ ಪ್ಲಾಸ್ಟಿಕ್ ಮರುಬಳಕೆ ಮಾಡಿ ಅದನ್ನು ನಿಯಂತ್ರಿಸಲು ಹೀಗೂ ಮಾಡಬಹುದು ಎಂಬ ಸ್ಪಷ್ಟ ಸಂದೇಶ ರವಾನಿಸಿ ಮಾದರಿಯಾಗಿದೆ. ನಿರುಪಯುಕ್ತ ಪ್ಲಾಸ್ಟಿಕ್ ಅನ್ನು ಜನೋಪಯೋಗಕ್ಕೆ ಬಳಕೆ ಮಾಡಿರುವ ಪಾಲಿಕೆ ಹಾಗೂ ಜಿಲ್ಲಾಡಳಿತದ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗಾಜಿಯಾಬಾದ್ನಲ್ಲಿ ನಿರುಪಯುಕ್ತ ಏಕಬಳಕೆ ಪ್ಲ್ಯಾಸ್ಟಿಕ್ ಉಪಯೋಗಿಸಿ ಮೂರು ರಸ್ತೆಗಳನ್ನು ನಿರ್ಮಿಸಲಾಗಿದೆ. ಇಲ್ಲಿನ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯ ಈ ಕಾರ್ಯಕ್ಕೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಅಭಿಯಾನಕ್ಕೆ ಪ್ರಭಾವಿತರಾದ ಪ್ಲಾಸ್ಟಿಕ್ ತ್ಯಾಜ್ಯ ವ್ಯಾಪಾರಿಗಳು ಏಕ ರೀತಿ ಬಳಕೆಯ ಪ್ಲಾಸ್ಟಿಕ್ ಅನ್ನು ಅದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಹಸ್ತಾಂತರಿಸುತ್ತಿದ್ದಾರೆ. ಈ ಮೂಲಕ ಪ್ಲಾಸ್ಟಿಕ್ ಅನ್ನು ಹೊಡೆದೊಡಿಸಲು ಕೈ ಜೋಡಿಸಿದ್ದಾರೆ.
ಪ್ಲಾಸ್ಟಿಕ್ ಮುಕ್ತ ದೇಶಕ್ಕಾಗಿ ಪಣತೊಟ್ಟಿರುವ ನಗರದ ನಾಲ್ವರು ಪ್ಲಾಸ್ಟಿಕ್ ತ್ಯಾಜ್ಯ ವ್ಯಾಪಾರಿಗಳು, ಜಿಲ್ಲಾಡಳಿತಕ್ಕೆ ಒಂದು ಟನ್ ಪ್ಲಾಸ್ಟಿಕ್ ಹಸ್ತಾಂತರಿಸಿದ್ದಾರೆ. ಅಲ್ಲದೆ, ಏಕ ರೀತಿ ಪ್ಲಾಸ್ಟಿಕ್ ಬಳಸುವುದನ್ನೇ ಕೈಬಿಟ್ಟಿದ್ದಲ್ಲದೆ, ಸಿಕ್ಕ ಸಿಕ್ಕಲ್ಲಿ ಪ್ಲಾಸ್ಟಿಕ್ ಸಂಗ್ರಹ ಮಾಡುತ್ತಿದ್ದಾರೆ. ಬಳಿಕ ಅಧಿಕಾರಿಗಳಿಗೆ ಹಸ್ತಾಂತರಿಸುತ್ತಿದ್ದಾರೆ. ವ್ಯಾಪಾರಿಗಳು ನೀಡಿದ ಹಾಗೂ ವಶಪಡಿಸಿಕೊಂಡ ಎಲ್ಲಾ ಪ್ಲಾಸ್ಟಿಕ್ನಿಂದ ಬರೀ ತಿಂಗಳಲ್ಲೇ 3 ರಸ್ತೆಗಳನ್ನು ನಿರ್ಮಿಸಿದ್ದಾರೆ. ಪಾಲಿಕೆ ಕೇವಲ ಮೂರು ರಸ್ತೆಗಳನ್ನಷ್ಟೇ ನಿರ್ಮಿಸಿಲ್ಲ. ಗೃಹ ಬಳಕೆ ಉಕ್ಕಿನ ವಸ್ತುಗಳನ್ನು ತಯಾರಿಸಿದೆ. ಅದಕ್ಕಾಗಿ ಕೇಂದ್ರವೊಂದನ್ನು ತೆರೆದಿದೆ. ಪ್ಲಾಸ್ಟಿಕ್ ಸಂಪೂರ್ಣವಾಗಿ ನಿರ್ನಾಮ ಮಾಡಲು ಹೊರಟಿರುವ ಪಾಲಿಕೆ ಜಿಲ್ಲಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಸಮರೋಪಾದಿಯಲ್ಲಿ ನಡೆಸುತ್ತಿದೆ.