ನವದೆಹಲಿ: ದೇಶದಲ್ಲಿ ಹೊಸ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿದ್ದು, ಬಹುಪಾಲು ಪ್ರಕರಣಗಳು ನವದೆಹಲಿಯ ನಿಜಾಮುದ್ದೀನ್ ಮರ್ಕಾಜ್ನೊಂದಿಗೆ ಸಂಬಂಧ ಹೊಂದಿವೆ. ನಿಜಾಮುದ್ದೀನ್ ಸೋಂಕು ಪ್ರಕರಣಕ್ಕೆ ಈಗ ಮತ್ತೊಂದು ತಿರುವು ಸಿಕ್ಕಿದೆ. ತಬ್ಲಿಘಿ ಜಮಾತ್ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರವನ್ನು ನಿರ್ಲಕ್ಷಿಸಲಾಗಿತ್ತು ಎಂಬುದು ಗೊತ್ತಾಗಿದೆ. ಲಾಕ್ಡೌನ್ ಘೋಷಣೆಯಾಗಿದ್ದರೂ ಕೂಡಾ ಸರ್ಕಾರದ ಆದೇಶವನ್ನು ಉಲ್ಲಂಘಿಸಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.
ನಿಜಾಮುದ್ದೀನ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ವೈದ್ಯಕೀಯ ಸಿಬ್ಬಂದಿ 36 ಗಂಟೆಗಳ ಕಾರ್ಯಚರಣೆಯಿಂದ ಸಂಪೂರ್ಣ ಕಟ್ಟಡವನ್ನು ಖಾಲಿ ಮಾಡಲಾಗಿದೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರಲ್ಲಿ ಒಟ್ಟು 2,361 ಮಂದಿ ಪತ್ತೆಯಾಗಿದ್ದು, ಅವರಲ್ಲಿ 617 ಮಂದಿಯನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಉಳಿದವರ ಕ್ವಾರಂಟೈನ್ನಲ್ಲಿದ್ದಾರೆ ಎಂದಿದ್ದಾರೆ. ದೆಹಲಿ ಸರ್ಕಾರ ನಿಜಾಮುದ್ದೀನ್ ಮರ್ಕಾಜ್ ಕಟ್ಟಡ ಸಂಪೂರ್ಣವಾಗಿ ಖಾಲಿಯಾಗಿರುವ ಬಗ್ಗೆ ಸ್ಪಷ್ಟನೆ ನೀಡಿದೆ.
ತಬ್ಲಿಘಿ ಜಮಾತ್ ಸಂಘಟನೆಯ ಮೇಲೆ ಸರ್ಕಾರಿ ಆದೇಶವನ್ನು ಉಲ್ಲಂಘಿಸಿದ ಆರೋಪದ ಮೇಲೆ ಐಪಿಸಿ ಸೆಕ್ಷನ್ 120ಬಿ ಅಡಿ ದೂರು ದಾಖಲಿಸಿಕೊಳ್ಳಲಾಗಿದೆ.