ಅಮರಾವತಿ (ಮಹಾರಾಷ್ಟ್ರ): ಚಿಕ್ಕ ಮಕ್ಕಳು ಅನಾರೋಗ್ಯಕ್ಕೆ ಒಳಗಾದರೆ ಆಸ್ಪತ್ರೆಗಳಿಗೆ ಕರೆದೊಯ್ಯುವ ಬದಲು ಡೋಂಗಿ ಬಾಬಾಗಳ ಮಾತು ಕೇಳಿ ಮೂಢನಂಬಿಕೆಗೆ ಒಳಗಾಗುವ ಪೋಷಕರು ಮಕ್ಕಳು ಇನ್ನಷ್ಟು ನೋವಿನಿಂದ ಬಳಲುವಂತೆ ಮಾಡುತ್ತಾರೆ.
ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಮೇಲ್ಘಾಟ್ನಲ್ಲಿ ಮಕ್ಕಳು ಅನಾರೋಗ್ಯಕ್ಕೆ ತುತ್ತಾದರೆ ಬೆಂಕಿಯಿಂದ ಕಾಯಿಸಿದ ಕತ್ತಿಯಿಂದ ಮಕ್ಕಳ ದೇಹದ ಮೇಲೆ ನೂರು ಬಾರಿ ಸುಡುವ ಅನಿಷ್ಟ ಸಂಪ್ರದಾಯ ಇನ್ನೂ ಜೀವಂತವಾಗಿದೆ. ಹೀಗೆ ಮಾಡಿದರೆ ಮಕ್ಕಳು ಗುಣಮುಖರಾಗುತ್ತಾರೆ ಎಂಬುದು ಇಲ್ಲಿನ ಜನರ ನಂಬಿಕೆ.
ಎರಡು ದಿನಗಳ ಹಿಂದಷ್ಟೆ ಹೊಟ್ಟೆ ಉಬ್ಬುವಿಕೆಯಿಂದ ಬಳಲುತ್ತಿದ್ದ ಬುಡಕಟ್ಟು ಜನಾಂಗದ ಎಂಟು ತಿಂಗಳ ಗಂಡು ಮಗುವಿನ ಮೇಲೆ ಈ ಪ್ರಯೋಗ ನಡೆದಿತ್ತು. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಇಲ್ಲಿ ಒಂದು ತಿಂಗಳ ಹೆಣ್ಣು ಮಗುವಿನ ಹೊಟ್ಟೆ ಮೇಲೆ ಕತ್ತಿಯಿಂದ ಸುಡಲಾಗಿದೆ. ಸುಟ್ಟ ಗಾಯಗಳಿಂದ ಬಳಲುತ್ತಿರುವ ಬಾಲಕಿಗೆ ಸದ್ಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂತಹ ಕೆಲವು ಪ್ರಕರಣಗಳು ಬೆಳಕಿಗೆ ಬಂದಿದ್ದು, ದುಡ್ಡಿನಾಸೆಗೆ ಪೋಷಕರ ತಲೆಯಲ್ಲಿ ಮೂಢನಂಬಿಕೆ ತುಂಬಿ, ಮಕ್ಕಳ ಜೀವಗಳಿಗೆ ಕುತ್ತು ತರುತ್ತಿರುವ ಡೋಂಗಿ ಬಾಬಾಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಗುತ್ತಿದೆ. ಆದರೆ ಈ ಬಗ್ಗೆ ಯಾರೂ ಕೂಡ ಪೊಲೀಸರಿಗೆ ದೂರು ನೀಡಲು ಮುಂದೆ ಬರುತ್ತಿಲ್ಲ ಎಂದು ವೈದ್ಯರು ಹೇಳುತ್ತಾರೆ.