ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ಸಿಎಂ ವಿರುದ್ಧ ಎಲ್ಜೆಪಿ ನಾಯಕ ಚಿರಾಗ್ ಪಾಸ್ವಾನ್ ತಿರುಗಿ ಬಿದ್ದಿದ್ದಾರೆ. ನಿತೀಶ್ ಕುಮಾರ್ ವಿರುದ್ಧ ಅಸಮಾಧಾನ ಹೊಂದಿರುವ ಚಿರಾಗ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಗೆ ಪತ್ರ ಬರೆದಿದ್ದಾರೆ.
ಬಿಹಾರ ಎಲೆಕ್ಷನ್ಗೆ ದಿನಗಣನೆ ಶುರುವಾಗಿದೆ. ಈ ಹೊತ್ತಲ್ಲಿ ಎಲ್ಜೆಪಿ ನಾಯಕ ರಾಮ್ ವಿಲಾಸ್ ಪಾಸ್ವಾನ್ ನಿಧನ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ. ಸೆಪ್ಟೆಂಬರ್ 24 ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾಗೆ ರಾಮ್ ವಿಲಾಸ್ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ಪತ್ರ ಬರೆದಿದ್ದಾರೆ. ಅದರಲ್ಲಿ ಸಿಎಂ ನಿತೀಶ್ ಕುಮಾರ್ ನನ್ನ ತಂದೆಯನ್ನ ಅವಮಾನಿಸಿದ್ದಾರೆ ಎಂದು ಬರೆದಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ಸಲುವಾಗಿ ಸಚಿವ ಅಮಿತ್ ಶಾ, ಸಿಎಂ ನಿತೀಶ್ ಕುಮಾರ್ ನನ್ನ ತಂದೆ ರಾಮ್ ವಿಲಾಸ್ ಪಾಸ್ವಾನ್ ಜತೆ ಚರ್ಚಿಸಿದ್ದರು. ಆ ವೇಳೆ ನಾನು ಕೂಡ ಹಾಜರಿದ್ದೆ. ಆ ಸಮಯದಲ್ಲಿ ಒಂದು ರಾಜ್ಯಸಭಾ ಸ್ಥಾನ ಎಲ್ಜೆಪಿಗೆ ಹೋಗಲಿದೆ ಎಂದು ನಿರ್ಧರಿಸಲಾಯಿತು. ಆದರೆ, ನಿತೀಶ್ ಕುಮಾರ್ ಅವರು ಎಲ್ಜೆಪಿಗೆ ನಾನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಅದಾಗ್ಯೂ ನಾಮಿನೇಷನ್ ಮಾಡುವ ಮೊದಲು ಸಿಎಂ ಅವರನ್ನ ಅವರ ನಿವಾಸದಲ್ಲಿ ಭೇಟಿ ಮಾಡಲಾಯಿತು. ಆದರೆ, ಅವರು ನಮ್ಮ ತಂದೆಯವರೊಂದಿಗೆ ಸರಿಯಾಗಿ ನಡೆದುಕೊಳ್ಳಲಿಲ್ಲ, ಉಮೇದುವಾರಿಕೆ ಸಲ್ಲಿಕೆಗೆ ಜತೆಯಲ್ಲೂ ಬರಲಿಲ್ಲ ಎಂದು ಆರೋಪಿಸಿದ್ದಾರೆ. ಇಷ್ಟೆಲ್ಲ ಅವಮಾನವಾದರೂ ನಾವೆಂದೂ ನಿತೀಶ್ ಕುಮಾರ್ ವಿರುದ್ಧ ಮಾತಾಡಿಲ್ಲ. ಮೈತ್ರಿಕೂಟದ ನಿಯಮಗಳನ್ನ ಪಾಲಿಸುತ್ತಲೇ ಬಂದಿದ್ದೇವೆ ಎಂದಿದ್ದಾರೆ.
ಸೆಪ್ಟೆಂಬರ್ 24 ರಂದು ನಿತೀಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿದ್ದರು. ಆ ಸಮಯದಲ್ಲಿ ಪಾಸ್ವಾನ್ ಆರೋಗ್ಯ ಸ್ಥಿತಿ ಹೇಗಿದೆ ಎಂದು ಕೇಳಿದಾಗ, ನಮಗೆ ತಿಳಿದಿಲ್ಲ ಎಂದರು. ಆದರೆ, ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಅಮಿತ್ ಶಾ ಸಹ ನಮ್ಮ ತಂದೆ ಆರೋಗ್ಯ ವಿಚಾರಿಸಿದರು. ರಾಜಕೀಯ ಬದಿಗಿಟ್ಟು ಹಲವಾರು ವಿಪಕ್ಷ ನಾಯಕರು ನಮ್ಮ ತಂದೆ ಆರೋಗ್ಯ ವಿಚಾರಿಸಿದರು. ಇವರಿಗಿದ್ದ ಕಾಳಜಿಯಲ್ಲಿ ಕಿಂಚಿತ್ತೂ ನಿತೀಶ್ ಕುಮಾರ್ಗೆ ಇಲ್ಲ ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಮೋದಿಯವರು ನಮ್ಮ ತಂದೆಗೆ ಕರೆ ಮಾಡಿ ಯೋಗ ಕ್ಷೇಮ ವಿಚಾರಿಸುವುದರ ಜತೆಗೆ ಕೋವಿಡ್ ನಿಯಂತ್ರಣಕ್ಕೆ ಸಲಹೆ ಪಡೆದರು. ಆದ್ರೆ, ನಿತೀಶ್ ಕುಮಾರ್ ಅವ್ರನ್ನ ಹಲವಾರು ಬಾರಿ ಭೇಟಿಯಾದ್ರೂ ನಮ್ಮನ್ನ ಒಂದು ಮಾತೂ ಮಾತಾಡಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 28 ರಿಂದ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿದ್ದು, ಎಲ್ಜೆಪಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ. ಜೆಡಿಯು ಸ್ಪರ್ಧಿಸುವ 143 ಕ್ಷೇತ್ರಗಳಲ್ಲೂ ತಮ್ಮ ಪಕ್ಷದ ಅಭ್ಯರ್ಥಿಗಳನ್ನ ಕಣಕ್ಕಿಳಿಸಲಿದ್ದು, ಸಿಎಂಗೆ ತಿರುಗೇಟು ಕೊಡಲು ನಿರ್ಧರಿಸಿದ್ದಾರೆ.