ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ ಅಕ್ಷಯ್ ಸಿಂಗ್ನ ಪತ್ನಿ ಪಟಿಯಾಲ ಹೌಸ್ ಕೋರ್ಟ್ ಹೊರಗೆ ಗುರುವಾರ ಮೂರ್ಛೆ ಹೋಗಿದ್ದಾಳೆ. ಪತಿಯನ್ನು ಗಲ್ಲಿಗೇರಿಸುವ ಮುನ್ನ ತನ್ನನ್ನು ಮತ್ತು ತನ್ನ ಮಗನನ್ನು ಸಹ ಗಲಿಗೇರಿಸಬೇಕು ಎಂದು ಒತ್ತಾಯಿಸಿದ್ದಾಳೆ.
'ನನಗೂ ನ್ಯಾಯ ಬೇಕು. ನನ್ನನ್ನು ಕೊಂದುಬಿಡಿ. ನನಗೂ ಬದುಕಲು ಇಷ್ಟವಿಲ್ಲ. ನನ್ನ ಗಂಡ ನಿರಪರಾಧಿ ಎಂದು ನ್ಯಾಯಾಲಯದ ಹೊರಗೆ ತನ್ನ ಅಳಲನ್ನು ತೊಡಿಕೊಂಡಿದ್ದಾಳೆ.
ನಮಗೆ ನ್ಯಾಯ ಸಿಗಬಹುದು ಎಂಬ ಭರವಸೆಯೊಂದಿಗೆ ನಾವು ಬದುಕುತ್ತಿದ್ದೆವು. ಆದರೆ ಕಳೆದ ಏಳು ವರ್ಷಗಳಿಂದ ನಾವು ಪ್ರತಿದಿನವೂ ಸಾಯುವಂತಾಗಿದೆ' ಎಂದಿದ್ದಾಳೆ.
ಹೀಗೆ ಕೋರ್ಟ್ ಆವರಣದಲ್ಲಿ ರೋದಿಸುತ್ತ ತನ್ನ ಚಪ್ಪಲಿಯಿಂದಲೇ ತಾನೇ ಹೊಡೆದುಕೊಳ್ಳುತ್ತಿದ್ದ ಆಕೆಯನ್ನು ವಕೀಲರು ಸಮಾಧಾನ ಪಡಿಸಿದರು.
ಮಾರ್ಚ್ 5 ರಂದು ವಿಚಾರಣಾ ನ್ಯಾಯಾಲಯವು ಅಪರಾಧಿಗಳಾದ ಮುಖೇಶ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಶರ್ಮಾ (26) ಮತ್ತು ಅಕ್ಷಯ್ (31) ರನ್ನು ಮಾರ್ಚ್ 20 ರಂದು ಬೆಳಗ್ಗೆ 5.30 ಕ್ಕೆ ಗಲ್ಲಿಗೇರಿಸಲು, ಹೊಸ ಡೆತ್ ವಾರಂಟ್ ಹೊರಡಿಸಿತ್ತು.
ಈ ಕುರಿತಂತೆ ನಾಲ್ವರು ಅಪರಾಧಿಗಳಲ್ಲಿ ಯಾವುದೇ ಕಾನೂನು ಪರಿಹಾರಗಳು ಬಾಕಿ ಉಳಿದಿಲ್ಲವೆಂದು ನ್ಯಾಯಾಲಯದಲ್ಲಿ ತಿಳಿಸಲಾಯಿತು.