ನವದೆಹಲಿ: ನಿರ್ಭಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ಅಕ್ಷಯ್ ಕುಮಾರ್ ಸಿಂಗ್, ಮರಣ ದಂಡನೆಯನ್ನು ಮರುಪರಿಶೀಲಿಸುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾನೆ. ಆದರೆ ಈ ಅರ್ಜಿಯಲ್ಲಿ ಯಾಕೆ ಅವರಿಗೆ ಮರಣದಂಡನೆ ನೀಡಬಾರದು ಎನ್ನುವುದನ್ನು ಸಮರ್ಥಿಸಿಕೊಳ್ಳಲು ನೀಡಿರುವ ಕುತೂಹಲಕಾರಿ ಉದಾಹರಣೆಗಳನ್ನು ಕೇಳಿದರೆ ನಿಮಗೆ ಆಶ್ಚರ್ಯವಾಗದೇ ಇರದು.
ಅಕ್ಷಯ್ ಸಿಂಗ್ ಪರವಾಗಿ ಆತನ ವಕೀಲರು14 ಪುಟಗಳ ಅಪರಾಧ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದು, ಇದರಲ್ಲಿ ಹಿಂದೂ ಧಾರ್ಮಿಕ ಗ್ರಂಥಗಳು ಹಾಗೂ ದೆಹಲಿ ಮಾಲಿನ್ಯದ ಬಿಕ್ಕಟ್ಟನ್ನು ಉಲ್ಲೇಖಿಸಿ ಮರಣದಂಡನೆ ನೀಡದಂತೆ ಕೇಳಿಕೊಳ್ಳಲಾಗಿದೆ.
"ವಯಸ್ಸು ಕಡಿಮೆಯಾಗುತ್ತಿರುವಾಗ ಮರಣದಂಡನೆ ಏಕೆ... ನಮ್ಮ ವೇದ, ಪುರಾಣ ಮತ್ತು ಉಪನಿಷತ್ತುಗಳಲ್ಲಿ ಜನರು ಸಾವಿರ ವರ್ಷಗಳ ಕಾಲ ಬದುಕಿದ್ದರು ಎಂದು ಉಲ್ಲೇಖಿಸಲಾಗಿದೆ. ಆದರೆ ಇದು ಕಲಿಯುಗ. ಈ ಯುಗದಲ್ಲಿ ಮನುಷ್ಯರ ಜೀವಿತಾವಧಿ ಕಡಿಮೆಯಾಗುತ್ತಿದ್ದು, 50-60 ವರ್ಷಗಳಿಗೆ ಬಂದು ತಲುಪಿದೆ. ಜೀವನದ ಕಟು ವಾಸ್ತವತೆಗಳನ್ನು ಎದುರಿಸಿದ ವ್ಯಕ್ತಿಯು ಶವಕ್ಕಿಂತ ಕಡೆ" ಎಂದು ಅಕ್ಷಯ್ ಕುಮಾರ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ.
ಅಲ್ಲದೇ "ರಾಷ್ಟ್ರೀಯ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ತೀರ ಕೆಟ್ಟಿದ್ದು, ಅನಿಲ ಕೊಠಡಿಯಂತಾಗಿದೆ. ಕುಡಿಯುವ ನೀರಿನ ಗುಣಮಟ್ಟ ಕಳಪೆಯಾಗಿದ್ದು, ವಿಷಕಾರಿಯಾಗಿದೆ. ಇದರಿಂದಾಗಿ ಜೀವನ ತುಂಬಾ ಸಣ್ಣದಾಗುತ್ತಾ ಹೋಗುತ್ತಿದೆ. ಹೀಗಿರುವಾಗ ಮರಣ ದಂಡನೆ ಏಕೆ ಬೇಕು? ಇದು ಬಹುತೇಕ ನೈಜ ವಿಶ್ಲೇಷಣೆಯಾಗಿದೆ" ಎಂದೂ ವಿವರಿಸಿದ್ದಾನೆ.
ಅಂತಿಮವಾಗಿ ಅರ್ಜಿಯು, "ಬಡ ಮತ್ತು ಅತ್ಯಂತ ಅಸಹಾಯಕ ವ್ಯಕ್ತಿಯ ಮುಖವನ್ನು ಒಮ್ಮೆ ನೆನಪಿಸಿಕೊಳ್ಳಿ" ಎಂಬ ಕಠಿಣ ಪ್ರಶ್ನೆಯನ್ನು ಎದುರಿಸುತ್ತಿರುವ ಜನರಿಗೆ ಮಹಾತ್ಮ ಗಾಂಧಿಯವರು ನೀಡಿದ ಪ್ರಸಿದ್ಧ ಸಲಹೆಯನ್ನು ಉಲ್ಲೇಖಿಸುತ್ತದೆ.
ಪ್ರಕರಣ ಹಿನ್ನೆಲೆ:
2012 ರ ಡಿಸೆಂಬರ್ 16 ರಂದು ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ, ಕ್ರೂರವಾಗಿ ಹಿಂಸೆ ನೀಡಲಾಗಿತ್ತು. ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಸಂತ್ರಸ್ತೆ ಸಾವನ್ನಪ್ಪಿದ್ದರು. ನಿರ್ಭಯಾ ಪ್ರಕರಣದ ಈ ಅಪರಾಧಿಗಳಿಗೆ ಸುಪ್ರೀಂಕೋರ್ಟ್ ಒಂದು ವರ್ಷದ ಹಿಂದೆ ಗಲ್ಲುಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಹೀಗಾಗಿ ಮರಣ ದಂಡನೆ ನೀಡಬಾರದೆಂದು ಕೋರಿ ಒಬ್ಬೊಬ್ಬ ಅಪರಾಧಿಗಳು ಕ್ಷಮಾದಾನ ಅರ್ಜಿ ಸಲ್ಲಿಸುತ್ತಾ ಬಂದಿದ್ದು, ಕೋರ್ಟ್ ಅವುಗಳನ್ನು ತಿರಸ್ಕರಿಸಿದೆ.