ಜಲ್ನಾ(ಮಹಾರಾಷ್ಟ್ರ): ತೃತೀಯ ಲಿಂಗಿ ಕಂಡರೆ ಇಂದಿಗೂ ಸಮಾಜದಲ್ಲಿ ಕೀಳು ಮಟ್ಟದಲೇ ನೋಡುವುದು ಕಾಮನ್. ಆದರೆ, ಇವರೆಲ್ಲರಿಗೂ ಸೆಡ್ಡು ಹೊಡೆದ ಮಂಗಳಮುಖಿಯರ ಗುಂಪೊಂದು ಎಲ್ಲರೂ ಹುಬ್ಬೇರಿಸುವಂತಹ ಕೆಲಸ ಮಾಡಿದ್ದಾರೆ.
ಮಹಾರಾಷ್ಟ್ರದ ಜಲ್ನಾ ಪ್ರದೇಶದಲ್ಲಿ ವಾಸವಾಗಿದ್ದ ಮಂಗಳಮುಖಿಯರ ಗುಂಪು ಸುಮಾರು 1 ಕೋಟಿ ರೂ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿ ಇತರರಿಗೆ ಮಾದರಿಯಾಗಿರುವ ಜತೆಗೆ ಸಮಾಜದಲ್ಲಿ ತಾವು ಯಾರಿಗೂ ಕಡಿಮೆ ಇಲ್ಲ ಎಂಬುದನ್ನ ಸಾಬೀತುಪಡಿಸಿದ್ದಾರೆ.
ಸುಂದರವಾಗಿ ಮನೆ ನಿರ್ಮಾಣ ಮಾಡಿರುವ ಮಂಗಳಮುಖಿಯರು ಜನವರಿ 30ರಂದು ಈ ಮನೆಯ ಉದ್ಘಾಟನೆ ನಡೆಸಲಿದ್ದಾರೆ. ಯಾವುದೇ ರಾಜಕೀಯ ಮುಖಂಡರು ಅಥವಾ ಬ್ಯುಸಿನೆಸ್ ಮ್ಯಾನ್ಗಳ ಮನೆಗೂ ಕಡಿಮೆ ಇಲ್ಲದ ರೀತಿಯಲ್ಲಿ ಈ ಮನೆ ನಿರ್ಮಾಣಗೊಂಡಿದೆ. ವಿಶೇಷವೆಂದರೆ ಸುಮಾರು 400 ವರ್ಷಗಳ ಹಿಂದೆ ಇವರ ಕುಟುಂಬಸ್ಥರು ಇದೇ ಜಾಗದಲ್ಲಿ ವಾಸವಾಗಿದ್ದರು ಎಂಬುದು ಗಮನಾರ್ಹ ವಿಚಾರ.
ಇದೇ ವಿಷಯವಾಗಿ ಈಟಿವಿ ಭಾರತ್ ಜತೆ ತಮ್ಮ ಮನದಾಳ ಹಂಚಿಕೊಂಡಿರುವ ತೃತೀಯ ಲಿಂಗಿ ಕಾಜೋಲ್, ಸಮಾಜದಲ್ಲಿ ನಮಗೂ ಒಳ್ಳೆಯ ಸ್ಥಾನಮಾನವಿದೆ. ಆದರೆ, ಕೆಲವೊಂದು ಪ್ರದೇಶಗಳಲ್ಲಿ ನಮ್ಮನ್ನ ಕೆಟ್ಟ ದೃಷ್ಟಿಯಿಂದ ನೋಡ್ತಿದ್ದಾರೆ. ನಮಗೆ ವಾಸ ಮಾಡಲು ಜಾಗವಿಲ್ಲದ ಕಾರಣ ರೈಲ್ವೆ ನಿಲ್ದಾಣಗಳಲ್ಲಿ ಉಳಿದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಆದರೆ, ಇದೀಗ ಸುಂದರವಾದ ಮನೆ ನಿರ್ಮಾಣಗೊಂಡಿದ್ದು, ಯಾರಿಗೂ ಹೆದರಬೇಕಾದ ಅನಿವಾರ್ಯತೆ ಇಲ್ಲ ಎಂದಿದ್ದಾರೆ.