ಶ್ರೀನಗರ: ಭೂಮಿ ಮಾರಾಟ ಮತ್ತು ಖರೀದಿ ಪ್ರಕ್ರಿಯೆ ಸಂಬಂಧ ಇದ್ದ ಕೈಪಿಡಿ ನೋಂದಣಿ ವ್ಯವಸ್ಥೆಯಿಂದ ಆನ್‌ಲೈನ್ ನೋಂದಣಿ ಮಾಡುವ ವ್ಯವಸ್ಥೆಯನ್ನು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಉದ್ಘಾಟಿಸಿದ್ದಾರೆ.
ರಾಷ್ಟ್ರೀಯ ಸಾಮಾನ್ಯ ದಾಖಲೆ ನೋಂದಣಿ ವ್ಯವಸ್ಥೆ(NGDRS)ಯನ್ನು ಇಂದು ಪ್ರಾರಂಭಿಸಲಾಗಿದ್ದು, ಕೇಂದ್ರಾಡಳಿತ ಪ್ರದೇಶದಲ್ಲಿ ಇನ್ಮುಂದೆ ಭೂಮಿ ಮಾರಾಟ ಮತ್ತು ಖರೀದಿ ಪ್ರಕ್ರಿಯೆ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಈ ವರೆಗೆ ಸ್ಟಾಂಪ್ ಪೇಪರ್‌ಗಳನ್ನು ಬಳಸಲಾಗುತ್ತಿತ್ತು. ಇನ್ಮುಂದೆ ಇದನ್ನು ಇ-ಸ್ಟ್ಯಾಂಪ್‌ಗಳಿಗೆ ಬದಲಾಯಿಸಲಾಗಿದೆ. ಇವುಗಳನ್ನು ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾದ ಸಹಯೋಗದೊಂದಿಗೆ ಸಂಯೋಜಿಸಲಾಗಿದೆ ಎಂದು ಜಮ್ಮು ಕಾಶ್ಮೀರ ಸರ್ಕಾರದ ಅಧಿಕೃತ ಹೇಳಿಕೆ ತಿಳಿಸಿದೆ.
ಜನ ಸಾಮಾನ್ಯರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಜವಾಬ್ದಾರಿಯುತ ಮತ್ತು ಪಾರದರ್ಶಕ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸುವತ್ತ ಸರ್ಕಾರದ ಮತ್ತೊಂದು ಹೆಜ್ಜೆಯನ್ನು ಇಟ್ಟಿದೆ ಎಂದು ಸಿನ್ಹಾ ಹೇಳಿದ್ದಾರೆ.