ನವದೆಹಲಿ: ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಮಲಬಾರ್ ನೌಕಾ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾ ತೀವ್ರ ಆಸಕ್ತಿ ತೋರಿಸಿದೆ. ಚೀನಾದ ವಿಸ್ತರಣಾವಾದಿ ಕಾರ್ಯಕ್ರಮ ಹಾಗೂ ಆಕ್ರಮಣಕಾರಿ ನೀತಿಯ ದವನಕ್ಕಾಗಿ ಭಾರತ ಆಸ್ಟ್ರೇಲಿಯಾವನ್ನ ಸಮರಾಭ್ಯಾಸದಲ್ಲಿ ಸೇರಿಸಿಕೊಳ್ಳುವ ತೀರ್ಮಾನಕ್ಕೆ ಬಂದಿದೆ.
ನಾಲ್ಕು ಸದಸ್ಯರ ಒಕ್ಕೂಟ ರಚಿಸುವ ಗುರಿಯನ್ನ ಹೊಂದಲಾಗಿದ್ದು, ಇಂಡೋ - ಪೆಸಿಫಿಕ್ ಸಮುದ್ರ ಭಾಗದಲ್ಲಿ ಶಾಂತಿ ಕಾಪಾಡುವ ಗುರಿ ಹೊಂದಿದೆ. ನವೆಂಬರ್ 2017ರಲ್ಲಿ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾಗಳು ಇಂಡೋ-ಪೆಸಿಫಿಕ್ ಸಮುದ್ರದ ಮಾರ್ಗಗಳನ್ನು ಯಾವುದೇ ಆಕ್ರಮಣದಿಂದ ಮುಕ್ತವಾಗಲು ಮತ್ತು ಇಲ್ಲಿನ ಸುರಕ್ಷತೆಗಾಗಿ ಚತುರ್ರಾಷ್ಟ್ರ ಒಕ್ಕೂಟ ರಚನೆ ಮಾಡುವ ನಿರ್ಧಾರಕ್ಕೆ ಬಂದು ಅದಕ್ಕೆ ಒಂದು ಆಕಾರ ನೀಡುವ ಪ್ರಯತ್ನ ಮಾಡಿತ್ತು.
ಈ ಪ್ರಯತ್ನದ ಭಾಗವಾಗಿ ಮಲಬಾರ್ ನೌಕಾ ಕಸರತ್ತಿನಲ್ಲಿ ಆಸ್ಟ್ರೇಲಿಯಾವನ್ನ ಹಾಗೂ ಅದರ ಆಸಕ್ತಿಯನ್ನ ಪರಿಗಣಿಸಿ ಒಕ್ಕೂಟದ ಭಾಗವಾಗಿಸಿಕೊಳ್ಳಲು ಭಾರತ ನಿರ್ಧರಿಸಿದ್ದು, ಮುಂದಿನ ಎರಡು ವಾರಗಳಲ್ಲಿ ಈ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಮೂಲಕ ಚೀನಾಕ್ಕೆ ಎಚ್ಚರಿಕೆ ನೀಡಲು ಭಾರತ ಸನ್ನದ್ಧವಾಗ್ತಿದೆ.