ಚೆನ್ನೈ : ಟೀಂ ಇಂಡಿಯಾದ ಕ್ಯಾಪ್ಟನ್ ಕೂಲ್ ಎಂದು ಪ್ರಸಿದ್ಧಿ ಪಡೆದಿರುವ ಮಹೇಂದ್ರ ಸಿಂಗ್ ಧೋನಿ ಮೈದಾನಕ್ಕಿಳಿದು ಬ್ಯಾಟ್ ಬೀಸುವಾಗ ಆರಂಭದ 5-10 ಎಸೆತ ಎದುರಿಸುವಾಗ ಎದೆ ನಡಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ.
ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಆಟಗಾರರು ಪ್ರಸ್ತುತ ದಿನಗಳಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಸಮಸ್ಯೆಗೊಳಗಾಗುತ್ತಿದ್ದಾರೆ. ಇದನ್ನು ಒಪ್ಪಿಕೊಳ್ಳಲು ಯಾವುದೇ ಆಟಗಾರನಿಂದಲೂ ಸಾಧ್ಯವಿರುವುದಿಲ್ಲ ಎಂದಿದ್ದಾರೆ. ತಂಡದಲ್ಲಿ ಮಾನಸಿಕ ಆರೋಗ್ಯ ಕೋಚ್ ಯಾವಾಗಲೂ ಇರಲೇಬೇಕು ಎಂದು ಅಭಿಪ್ರಾಯಪಟ್ಟಿರುವ ಧೋನಿ, ಈ ವಿಚಾರವನ್ನ ಕೋಚ್ ಬಳಿ ಚರ್ಚಿಸಲು ಆಟಗಾರರು ಹಿಂಜರಿಯುತ್ತಾರೆ ಎಂದು ಹೇಳಿದ್ದಾರೆ.
ತಂಡಕ್ಕೆ ಮಾನಸಿಕ ಆರೋಗ್ಯ ಕೋಚ್ 15 ದಿನಗಳಿಗೊಮ್ಮೆ ಭೇಟಿ ನೀಡುತ್ತಾರೆ. ಈ ವೇಳೆ ಬಂದರೆ ಕೇವಲ ಅನುಭವ ಮಾತ್ರ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ ತಂಡದೊಂದಿಗೆ ಅವರು ಸದಾ ಇರಲೇಬೇಕು ಎಂದು ಧೋನಿ ಹೇಳಿದ್ದು, ತಂಡದೊಂದಿಗೆ ಇರುವುದರಿಂದ ಆಟಗಾರ ಎದುರಿಸುತ್ತಿರುವ ಸಮಸ್ಯೆ ಏನು ಎಂಬುದು ಗೊತ್ತಾಗುತ್ತದೆ ಎಂದಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಎಸ್ ಬದ್ರೀನಾಥ್ ಆರಂಭ ಮಾಡಿರುವ ಮೆಂಟಲ್ ಕಂಡೀಷನಿಂಗ್ ಯೋಜನೆ ಬಗ್ಗೆ ಮಾತನಾಡುತ್ತಿದ್ದ ವೇಳೆ ಧೋನಿ ಈ ಮಾಹಿತಿ ಹೊರಹಾಕಿದ್ದಾರೆ. ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡಬೇಕಾದರೆ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ಅಗತ್ಯವಿದೆ ಎಂದಿದ್ದಾರೆ.
ವಿಶ್ವಕಪ್ ಸೆಮಿಫೈನಲ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಟೀಂ ಇಂಡಿಯಾ ಸೋಲು ಕಂಡಾಗಿನಿಂದಲೂ ಧೋನಿ ತಂಡ ಪ್ರತಿನಿಧಿಸಿಲ್ಲ. ಐಪಿಎಲ್ಗಾಗಿ ಭರ್ಜರಿ ತಯಾರಿ ನಡೆಸಿದ್ದ ಧೋನಿ ಸದ್ಯ ಮನೆಯಲ್ಲಿದ್ದಾರೆ.