ಗೊಂಡಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಗೊಂಡಾದಲ್ಲಿ ನಿನ್ನೆ ಅಪಹರಣಕ್ಕೊಳಗಾದ 6 ವರ್ಷದ ಬಾಲಕನನ್ನು ರಕ್ಷಿಸಲಾಗಿದೆ. ಈ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವಿಶೇಷ ಕಾರ್ಯಪಡೆ ಐಜಿ ಅಮಿತಾಭ್ ಯಶ್ ತಿಳಿಸಿದ್ದಾರೆ.
ಅಪಹರಣಕಾರರು ಮಗುವಿನ ಕುಟುಂಬದಿಂದ 4 ಕೋಟಿ ರೂ. ಬೇಡಿಕೆಯಿಟ್ಟಿದ್ದರು. ಗುಟ್ಕಾ ವ್ಯಾಪಾರಿ ರಾಜೇಶ್ ಕುಮಾರ್ ಗುಪ್ತಾ ಅವರ ಮೊಮ್ಮಗನನ್ನು ಶುಕ್ರವಾರ ಮಧ್ಯಾಹ್ನ ಅಪಹರಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯ ಗುರುತಿನ ಚೀಟಿಗಳನ್ನು ಹೊಂದಿದ್ದ ಕೆಲವರು ಮಾಸ್ಕ್ ವಿತರಿಸುವ ನೆಪದಲ್ಲಿ ಜಿಲ್ಲೆಯ ಕರ್ನಾಲ್‌ಗಂಜ್ ಪ್ರದೇಶಕ್ಕೆ ಬಂದಿದ್ದರು. ಆರು ವರ್ಷದ ಬಾಲಕನಿಗೆ ಕಾರಿನಲ್ಲಿದ್ದ ಆರೋಪಿಗಳು ಹ್ಯಾಂಡ್ ಸ್ಯಾನಿಟೈಸರ್ ನೀಡಲು ಆತನ ಬಳಿಗೆ ಬಂದು ವಾಹನದ ಒಳಗೆ ಎಳೆದಿದ್ದಾರೆ. ಸ್ವಲ್ಪ ಸಮಯದ ನಂತರ, ಮಹಿಳೆಯೊಬ್ಬಳು 4 ಕೋಟಿ ರೂ. ನೀಡುವಂತೆ ಬಾಲಕನ ಮನೆಯವರಿಗೆ ಕರೆ ಮಾಡಿ ತಿಳಿಸಿದ್ದಾಳೆ.
ಆದರೆ ಸ್ಥಳಕ್ಕೆ ಬಂದ ತಂಡಕ್ಕೆ ಯಾವುದೇ ಮಹಿಳೆ ಇರಲಿಲ್ಲ ಎಂಬುದು ಗೊತ್ತಾಗಿದೆ. ಆರು ವರ್ಷದ ಬಾಲಕನ ತಂದೆ ಹರಿ ಗುಪ್ತಾ ನೀಡಿದ ದೂರಿನ ಮೇರೆಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಂದ್ರ ಕುಮಾರ್ ತನಿಖೆ ನಡೆಸಿ ಬಾಲಕನ್ನು ರಕ್ಷಿಸಿದ್ದಾರೆ.