ನವದೆಹಲಿ: ಮೇ 25ರಿಂದ ಪ್ರಾದೇಶಿಕ ಚಾರ್ಟರ್ಡ್ ವಿಮಾನಗಳ ಹಾರಾಟಕ್ಕೆ ನಾಗರಿಕ ವಿಮಾನಯಾನ ಸಚಿವಾಲಯ ಅನುಮತಿ ನೀಡಿದ್ದು, ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ನಿಗದಿತವಲ್ಲದ ಅಥವಾ ಖಾಸಗಿಯವರ ಫಿಕ್ಸೆಡ್ ವಿಂಗ್ ವಿಮಾನ ಮತ್ತು ಹೆಲಿಕಾಪ್ಟರ್ ಹಾಗೂ ಚಾರ್ಟರ್ಡ್ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಲಾಗಿದೆ. ಈ ವಿಮಾನ ಸೇವೆಗಳಿಗೂ ಇತರ ವಾಣಿಜ್ಯ ಮತ್ತು ಪ್ರಯಾಣಿಕ ವಿಮಾನ ಸೇವೆಗಳಂತೆಯೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ನೂತನ ಮಾರ್ಗಸೂಚಿ ಪ್ರಕಾರ, ವಿಮಾನ ಅಥವಾ ಹೆಲಿಕಾಪ್ಟರ್ ಪ್ರಯಾಣಿಕರು ನೇರವಾಗಿ ಟಿಕೆಟ್ ಪಡೆಯಬೇಕು. ಕನಿಷ್ಠ 45 ನಿಮಿಷಕ್ಕಿಂತ ಮೊದಲು ಹೆಲಿಪ್ಯಾಡ್ ಅಥವಾ ಹೆಲಿಪೋರ್ಟ್ ತಲುಪಬೇಕು. ಸ್ಥಳೀಯ ಆಡಳಿತ ನಿಗದಿಪಡಿಸಿದ ಎಲ್ಲಾ ಆರೋಗ್ಯ ಪ್ರೊಟೋಕಾಲ್ಗಳನ್ನು ಪಾಲಿಸಿದ ಬಳಿಕ ಹೆಲಿಪ್ಯಾಡ್ ಅಥವಾ ಹೆಲಿಪೋರ್ಟ್ ಬಳಿಯೇ ಬೋರ್ಡಿಂಗ್ ಪಾಸ್ ನೀಡಲಾಗುತ್ತದೆ.
ಇನ್ನು ಏರ್ ಆ್ಯಂಬುಲೆನ್ಸ್ ಸೇವೆ ಇಲ್ಲದ ಕಾರಣ ವಿಶೇಷ ಚೇತನರು, ವಯಸ್ಸಾದವರು ಮತ್ತು ಗರ್ಭಿಣಿಯರು ವಿಮಾನ ಪ್ರಯಾಣ ಮಾಡದಿರುವುದು ಒಳ್ಳೆಯದು ಎಂದು ವಿಮಾನಯಾನ ಸಚಿವಾಲಯ ತಿಳಿಸಿದೆ. ಇನ್ನು ದೇಶಿಯ ವಿಮಾನ ಪ್ರಯಾಣಕ್ಕೆ ಕಳೆದ ವಾರ ನಿಗದಿಪಡಿಸಿದ ಟಿಕೆಟ್ ದರ ಚಾರ್ಟೆಡ್ಗೆ ಅನ್ವಯಿಸುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ. ಎರಡು ತಿಂಗಳ ಬಳಿಕ ಸೋಮವಾರದಿಂದ ದೇಶಿಯ ವಿಮಾನಗಳ ಹಾರಾಟಕ್ಕೆ ವಿಮಾನಯಾನ ಸಚಿವಾಲಯ ಗ್ರೀನ್ ಸಿಗ್ನಲ್ ನೀಡಿದ್ದು, ಒಟ್ಟು 532 ವಿಮಾನಗಳು ಕಾರ್ಯಾರಂಭ ಮಾಡಿವೆ.