ವ್ಯಕ್ತಿಗಳಲ್ಲಿ ಸೋಂಕು ಉತ್ಪನ್ನ ಮಾಡುವ SARS-CoV-2 ವೈರಸ್ ಜೀವಿಗಳ ಕೋಶದೊಳಗೆ ಪ್ರವೇಶಿಸದಂತೆ ತಡೆಯುವ ಔಷಧವೊಂದನ್ನು ಸಂಶೋಧಕರು ಕಂಡು ಹಿಡಿದಿದ್ದು, ಇದರ ಟ್ರಯಲ್ಗಳು ಯಶಸ್ವಿಯಾದಲ್ಲಿ ನೊವೆಲ್ ಕೊರೊನಾ ವೈರಸ್ ಚಿಕಿತ್ಸೆಯಲ್ಲಿ ಮೈಲುಗಲ್ಲಾಗಲಿದೆ ಎಂದು ಹೇಳಲಾಗಿದೆ.
ಫ್ಲುವೋಕ್ಸಾಮೈನ್ (fluvoxamine) ಎಂಬ ಔಷಧಿಯನ್ನು ಪುನರಾವರ್ತಿಸುವ ಗೀಳು ಬೇನೆ (obsessive-compulsive disorder - OCD) ಹೊಂದಿರುವ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಇದೇ ಔಷಧಿಯನ್ನು ಮಾರ್ಪಡಿಸಿ ಕೋವಿಡ್-19 ವಿರುದ್ಧ ಔಷಧಿ ತಯಾರಿಸುವ ಕುರಿತು ಸಂಶೋಧಕರು ಹೆಚ್ಚಿನ ಸಂಶೋಧನೆಗಳನ್ನು ಕೈಗೊಳ್ಳುತ್ತಿದ್ದಾರೆ.
ಅತ್ಯಂತ ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವವರಿಗೆ ಕೋವಿಡ್-19 ಅತಿ ಹೆಚ್ಚು ಅಪಾಯವನ್ನುಂಟು ಮಾಡುತ್ತದೆ ಎಂಬುದು ಈಗಾಗಲೇ ಸಾಬೀತಾಗಿದೆ. ಅದರಲ್ಲೂ 60 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಸೋಂಕು ಮಾರಣಾಂತಿಕವಾಗಿರುತ್ತದೆ.
ಫ್ಲುವೋಕ್ಸಾಮೈನ್ ಇದು ಸೆರೊಟೋನಿನ್-ರಿಅಪ್ಟೇಕ್ ಇನ್ಹಿಬಿಟರ್ಸ್ (serotonin-reuptake inhibitors - SSRIs) ವರ್ಗೀಕೃತ ಶ್ರೇಣಿಯ ಔಷಧಿಯಾಗಿದ್ದು, ಜೀವಕೋಶಗಳ ಮೇಲಾಗುವ ಬಾಹ್ಯ ದಾಳಿಗಳ ಸಂದರ್ಭದಲ್ಲಿ ಪ್ರತಿಕ್ರಿಯೆ ಉಂಟುಮಾಡುವ ದೇಹದ ಪ್ರಮುಖ ಪ್ರೋಟೀನ್ ಒಂದರ ಬಿಡುಗಡೆಯ ಮೇಲೆ ಇದು ಪ್ರಭಾವ ಬೀರುತ್ತದೆ ಎಂದು ವಾಶಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ನ ಸಂಶೋಧಕರು ಹೇಳಿದ್ದಾರೆ.
SARS-CoV-2 ವೈರಸ್ ಆಣ್ವಿಕ ಮಟ್ಟದಲ್ಲಿ ACE2 ಮೇಲೆ ದಾಳಿ ಮಾಡುವುದನ್ನು ತಡೆಗಟ್ಟಬಲ್ಲ ವೈಜ್ಞಾನಿಕವಾಗಿ ಸಾಬೀತಾಗಿರುವ ಯಾವುದೇ ವೈರಸ್ ನಿರೋಧಕ ಥೆರಪಿ ಅಥವಾ ಚಿಕಿತ್ಸೆ ಲಭ್ಯವಿಲ್ಲದಿರುವುದರಿಂದ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ಅಸ್ತ್ರವಿಲ್ಲದ ಸೈನಿಕರಂತೆ ಅಸಹಾಯಕರಾಗಿದ್ದಾರೆ ಎನ್ನುತ್ತಾರೆ ಸಂಶೋಧಕರು.
"ಮಾನಸಿಕ ರೋಗದ ಚಿಕಿತ್ಸೆಗಾಗಿ ಬಳಸಲ್ಪಡುವ ಔಷಧಿಯನ್ನು ಕೋವಿಡ್-19 ಚಿಕಿತ್ಸೆಗೆ ಬಳಸಬಹುದು ಎಂಬುದು ತರ್ಕಹೀನವಾಗಿ ಕಾಣಬಹುದು. ಆದರೆ ಮಲೇರಿಯಾ ಔಷಧಿಯನ್ನು ಕೋವಿಡ್-19 ಚಿಕಿತ್ಸೆಗೆ ಬಳಸಬಹುದು ಎಂಬುದಕ್ಕಿಂತ ಇದು ತರ್ಕಹೀನವಲ್ಲ." ಎನ್ನುತ್ತಾರೆ ವ್ಯಾಲೇಸ್ ಆ್ಯಂಡ್ ಲೂಸಿಲ್ಲೆ ರೆನಾರ್ಡ್ ಪ್ರೊಫೆಸರ್ ಆಫ್ ಸೈಕಿಯಾಟ್ರಿ ಆಂಡ್ ಸ್ಟಡೀಸ್ನ ಎಂಡಿ ಎರಿಕ್ ಜೆ. ಲೆಂಜ್.
ಕೋವಿಡ್-19 ಕಾಯಿಲೆಯು ಈ ಕೆಳಗಿನ ಎರಡು ಪ್ರಮುಖ ಹಂತಗಳನ್ನು ಒಳಗೊಂಡಿದೆ ಎನ್ನುತ್ತಾರೆ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಕ್ಯಾಲಿನ್ ಮ್ಯಾಟ್ಟರ್:
1. ಸೋಂಕು ತಗುಲಿದಾಗ ಅದೇ ಸೋಂಕಿನಿಂದ ವ್ಯಕ್ತಿಗೆ ಜ್ವರ ಹಾಗೂ ಕೆಮ್ಮು ಪ್ರಾರಂಭವಾಗಿ ರೋಗಗ್ರಸ್ತನನ್ನಾಗಿ ಮಾಡುವುದು ಇದರ ಲಕ್ಷಣಗಳಲ್ಲೊಂದು.
2. ಸೈಟೋಕಿನ್ ಸ್ಟಾರ್ಮ್ (cytokine storm) ಎಂದು ಕರೆಯಲಾಗುವ ಮಾರಣಾಂತಿಕ ರೋಗ ಪ್ರಕ್ರಿಯೆ.
ಎರಡನೇ ಹಂತದ ರೋಗಲಕ್ಷಣಗಳನ್ನು ಗುಣಪಡಿಸುವಲ್ಲಿ ಫ್ಲುವೋಕ್ಸಾಮೈನ್ ಸಹಾಯಕವಾಗಬಹುದು ಎಂಬುದು ಅವರ ಅಭಿಪ್ರಾಯವಾಗಿದೆ.