ಗುರುಗ್ರಾಮ: ಹೋಳಿ ಹಬ್ಬದ ದಿನ ಕ್ರಿಕೆಟ್ ಆಡುವ ಸಂಬಂಧ ಮಾತಿನ ಚಕಮಕಿ ನಡೆದು, ಅನ್ಯ ಧರ್ಮದ ಕುಟುಂಬಸ್ಥರ ಮೇಲೆ ಜನರ ಗುಂಪೊಂದು ಮಾರಣಾಂತಿಕ ಹಲ್ಲೆ ಮಾಡಿದೆ. ಹರಿಯಾಣದ ಗುರುಗ್ರಾಮದಲ್ಲಿ ಗುರುವಾರ ಸಂಜೆ ಈ ಘಟನೆ ನಡೆದಿದೆ.
ಹಾಕಿ ಸ್ಟಿಕ್, ರಾಡ್ ಹಾಗೂ ಮಾರಕಾಸ್ತ್ರಗಳೊಂದಿಗೆ ಮನೆಗೆ ನುಗ್ಗಿ ಕುಟುಂಬಸ್ಥರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪರಿಣಾಮ ಕುಟುಂಬದ ಮೂವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಹಲ್ಲೆ ಮಾಡಿದ 15 ಜನರನ್ನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಪುರುಷ ಹಾಗೂ ಮಹಿಳೆಯರು ಸೇರಿದಂತೆ ಕುಟುಂಬಸ್ಥರ ಮೇಲೆ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕುಟುಂಬಸ್ಥರು ಪರಿಪರಿಯಾಗಿ ಬೇಡಿಕೊಂಡರೂ ಹೀನಾಯವಾಗಿ ಥಳಿಸಿ ಕಿಡಿಗೇಡಿಗಳು ಅಮಾನವೀಯತೆ ತೋರಿದ್ದಾರೆ.
ಭುಪ್ ಸಿಂಗ್ ನಗರದ ತಮ್ಮ ಮನೆಯ ಆವರಣದಲ್ಲಿ ಸಂತ್ರಸ್ತರು ಕ್ರಿಕೆಟ್ ಆಡುವಾಗ ಘರ್ಷಣೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದಾಳಿ ಮಾಡಿದವರು ಕುಡಿದ ಮತ್ತಿನಲ್ಲಿದ್ದರು ಎಂದು ತಿಳಿದುಬಂದಿದೆ. ಇನ್ನೊಂದೆಡೆ ರಸ್ತೆಯಲ್ಲಿ ಕ್ರಿಕೆಟ್ ಆಡದಂತೆ ಕುಟುಂಬಸ್ಥರಿಗೆ ಗುಂಪೊಂದು ಹೇಳಿತ್ತಂತೆ. ಆದರೂ ಕುಟುಂಬಸ್ಥರು ಅಲ್ಲೇ ಆಡುವಾಡುತ್ತಿದ್ದರಿಂದ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.