ತೆಲಂಗಾಣ: ಎರಡನೇ ಹೆರಿಗೆಯಲ್ಲಿಯೂ ಪತ್ನಿಗೆ ಅವಳಿ ಹೆಣ್ಣು ಮಕ್ಕಳು ಜನಿಸಿದ್ದಾರೆ ಎಂದು ಕೋಪಗೊಂಡ ಪತಿ, ತನ್ನ ನವಜಾತ ಹೆಣ್ಣು ಮಕ್ಕಳಿಗೆ ವಿಷ ನೀಡಿ ಕೊಲೆ ಮಾಡಲು ಯತ್ನಿಸಿದ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ.
ತೆಲಂಗಾಣದ ಮೆಹಬೂಬ್‌ನಗರ ಜಿಲ್ಲೆಯ ಗಂದೀದ್ ಮಂಡಲದ ದೇಸಾಯಿಪಲ್ಲಿ ನಿವಾಸಿ ಕೃಷ್ಣವೇಣಿ ಕೊಸ್ಗಿಯ ಖಾಸಗಿ ಆಸ್ಪತ್ರೆಯಲ್ಲಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಇದರಿಂದ ಕೋಪಗೊಂಡ ತಂದೆಯೇ ತನ್ನ ಹೆಣ್ಣು ಮಕ್ಕಳನ್ನು ಕೊಲ್ಲಲು ಯತ್ನಿಸಿದ್ದಾನೆ.
ಮೊದಲ ಹೆರಿಗೆಯಿಂದ ದಂಪತಿಗೆ ಒಬ್ಬಳು ಮಗಳಿದ್ದಾಳೆ. ಎರಡನೇ ಹೆರಿಗೆಯಲ್ಲಿಯೂ ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದರಿಂದ ಕೋಪಗೊಂಡ ತಂದೆ ಮಕ್ಕಳು ಹುಟ್ಟಿದ ಎರಡನೇ ದಿನ ಮದ್ಯದ ಅಮಲಿನಲ್ಲಿ ಕೀಟನಾಶಕ ಖರೀದಿಸಿ, ಆಸ್ಪತ್ರೆಗೆ ಬಂದು ತನ್ನ ಇಬ್ಬರು ಮಕ್ಕಳಿಗೆ ಕುಡಿಸಿದ್ದಾನೆ.
ಅವಳಿ ಶಿಶುಗಳ ಬಾಯಿಯಿಂದ ನೊರೆ ಹೊರಬರುವುದನ್ನು ಗಮನಿಸಿದ ಸಂಬಂಧಿಕರು ವೈದ್ಯರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದ್ದು, ಶಿಶುಗಳ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಸಂಬಂಧ ತಾಯಿ ಕೃಷ್ಣವೇಣಿಯ ಸಂಬಂಧಿಕರ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.