ನವದೆಹಲಿ: ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರು ಹಾಗೂ ಕೇಂದ್ರ ಸರ್ಕಾರದ ನಡುವೆ ಇಂದು ಐದನೇ ಸುತ್ತಿನ ಮಾತುಕತೆ ನಡೆಯಲಿದೆ.
ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದ ಸುಧಾರಣೆಗಾಗಿ ಹೊಸದಾಗಿ ಮೂರು ಕಾಯ್ದೆಗಳನ್ನು ಜಾರಿಗೆ ತಂದಿದ್ದು, ಈ ಕಾಯ್ದೆಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ರೈತ ಸಂಘಟನೆಗಳ ಮುಖಂಡರನ್ನು ಕೇಂದ್ರ ಸರ್ಕಾರ ಮಾತುಕತೆಗೆ ಆಹ್ವಾನಿಸಿದೆ.
ಗುರುವಾರ, ಕೇಂದ್ರದೊಂದಿಗೆ ನಾಲ್ಕನೇ ಸುತ್ತಿನ ಮಾತುಕತೆ ನಡೆಸಿದ್ದ ರೈತರು, ಕೃಷಿ ಕಾನೂನುಗಳಿಗೆ ಕೆಲವು ತಿದ್ದುಪಡಿಗಳ ಬಗ್ಗೆ ಸರ್ಕಾರ ಮಾತನಾಡಿದೆ ಎಂದು ಹೇಳಿದ್ದರು.
ರೈತರೊಂದಿಗಿನ ಸಭೆ ಬಳಿಕ ಪ್ರತಿಕ್ರಿಯಿಸಿದ್ದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಸರ್ಕಾರವು ತೆರೆದ ಮನಸ್ಸಿನಿಂದ ಮಾತುಕತೆ ನಡೆಸಿದೆ. ಹೊಸ ಕಾಯ್ದೆಗಳಿಂದ ಎಪಿಎಂಸಿಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತವೆ ಎಂಬ ಭೀತಿಯಲ್ಲಿ ರೈತರಿದ್ದಾರೆ ಎಂದು ಸ್ಪಷ್ಟನೆ ನೀಡಿದರು. ರೈತರ ಜೊತೆಗೆ ನಡೆಸಿದ ಸಭೆ ಕುರಿತಂತೆ ಶುಕ್ರವಾರ ಕೇಂದ್ರ ಸರ್ಕಾರ ಚರ್ಚೆ ನಡೆಸಲಿದೆ, ಶನಿವಾರ ನಡೆಯುವ ಸಭೆಯಲ್ಲಿ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದಿದ್ದರು.
ಕೃಷಿ ಕಾಯ್ದೆಗಳ ವಿಚಾರವಾಗಿ ಒಮ್ಮತಕ್ಕೆ ಬರಲು ರೈತರು ಹಾಗೂ ಕೇಂದ್ರ ಸರ್ಕಾರ ವಿಫಲವಾಗಿದ್ದ ಕಾರಣ ಡಿ.3 ರಂದು ನಡೆದಿದ್ದ ಮಾತುಕತೆ ವಿಫಲವಾಗಿತ್ತು.