ಅಮೃತಸರ (ಪಂಜಾಬ್): ಹೊಸ ಕೃಷಿ ಮಸೂದೆಗಳ ವಿರುದ್ಧ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯು ಸತತ ಆರನೇ ದಿನವೂ ಪಂಜಾಬ್‌ನ ಅಮೃತಸರದ ದೇವದಾಸ್‌ಪುರ ಗ್ರಾಮದಲ್ಲಿ 'ರೈಲ್ ರೋಕೋ' ಆಂದೋಲನ ಮುಂದುವರೆಸಿದೆ.
ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಬ್ಯಾನರ್ ಅಡಿಯಲ್ಲಿ ಪ್ರತಿಭಟನಾಕಾರರು, ದೇವದಾಸ್ಪುರದಲ್ಲಿ ರೈಲ್ವೆ ಮಾರ್ಗಗಳಲ್ಲಿ ಟೆಂಟ್ ಹಾಕುವ ಮೂಲಕ ರೈಲು ಸಂಚಾರವನ್ನು ನಿರ್ಬಂಧಿಸಿದ್ದಾರೆ. ಹೊಸ ಮಸೂದೆಗಳನ್ನು ವಿರೋಧಿಸಿ ಕಪ್ಪು ಬಟ್ಟೆಗಳನ್ನು ಧರಿಸಿದ್ದಾರೆ.
ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಸಂಸತ್ತು ಅಂಗೀಕರಿಸಿದ ಕೃಷಿ ಮಸೂದೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.
ಕೃಷಿ ಮಸೂದೆಗಳ ವಿರುದ್ಧ ಇದೇ ರೀತಿಯ ಪ್ರತಿಭಟನೆಗಳು ಉತ್ತರ ಪ್ರದೇಶ, ಹರಿಯಾಣ ಮತ್ತು ಒಡಿಶಾ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿವೆ.