ಪಶ್ಚಿಮ ಗೋದಾವರಿ: ಕುಟುಂಬದ ಯಜಮಾನ ಕೊರೊನಾದಿಂದ ಸಾವನ್ನಪ್ಪಿದ ಹಿನ್ನೆಲೆ ಹೆಂಡ್ತಿ, ಮಕ್ಕಳು ಗೋದಾವರಿ ನದಿಗೆ ಹಾರಿ ಬಾರದಲೋಕಕ್ಕೆ ತೆರಳಿರುವ ದುರಂತ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಪಶಿವೇದ ಗ್ರಾಮದಲ್ಲಿ ನಡೆದಿದೆ.
ಚಿಕ್ಕದಾದ್ರೂ ಚೊಕ್ಕವಾಗಿದ್ದ ಕುಟುಂಬ...
ಇಲ್ಲಿನ ನಿವಾಸಿ ನರಸಿಂಹರಾವ್ (50), ಸುನೀತಾ (45) ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು. ಮಗ ಫಣಿಕುಮಾರ್ ಗಣಿಗಾರಿಕೆ ಮತ್ತು ಭೂವಿಜ್ಞಾನ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿದ್ದು, ಗುಜರಾತ್‌ನಲ್ಲಿ ಕೆಲಸ ಮಾಡುತ್ತಿದ್ದರು. ಲಕ್ಷ್ಮಿ ಅಪರ್ಣ ಹೈದರಾಬಾದ್‌ನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದರು. ಒಟ್ಟಿನಲ್ಲಿ ಇರದ್ದು ಚಿಕ್ಕದಾದ್ರೂ ಚೊಕ್ಕವಾಗಿರುವ ಕುಟುಂಬವಾಗಿತ್ತು.
ಯಜಮಾನನಿಗೆ ವಕ್ಕರಿಸಿದ ಕೊರೊನಾ...
ಕೆಲ ದಿನಗಳ ಹಿಂದೆ ಜ್ವರ ಮತ್ತು ಕೆಮ್ಮಿನಿಂದ ನರಸಿಂಹರಾವ್ ಬಳಲುತ್ತಿದ್ದರು. ಸಣ್ಣ-ಪುಟ್ಟ ಜ್ವರವೆಂದು ನಿರ್ಲಕ್ಷ್ಯ ವಹಿಸಿದ ನರಸಿಂಹರಾವ್ ಆರೋಗ್ಯ ದಿನದಿಂದ ದಿನಕ್ಕೆ ಕ್ಷಿಣಿಸುತ್ತಿತ್ತು. ಆಗಸ್ಟ್ 14ರಂದು ಉಸಿರಾಟದ ತೊಂದರೆಯಿಂದಾಗಿ ಸರ್ಕಾರಿ ಆಸ್ಪತ್ರೆಗೆ ನರಸಿಂಹರಾವ್ ಅವರನ್ನು ದಾಖಲಿಸಲಾಗಿತ್ತು. ಬಳಿಕ ಕೋವಿಡ್ ಪರೀಕ್ಷೆಗೊಳಪಡಿಸಿದಾಗ ಕೊರೊನಾ ಸೋಂಕು ತಗುಲಿರುವುದು ದೃಢವಾಗಿತ್ತು.
ಕೊರೊನಾಗೆ ಯಜಮಾನ ಬಲಿ!
ಆ.15ರಂದು ಅಂದ್ರೆ ಮರುದಿನ ನರಸಿಂಹರಾವ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ.16ರಂದು ಚಿಕಿತ್ಸೆ ಫಲಿಸದೇ ನರಸಿಂಹರಾವ್ ಮೃತಪಟ್ಟರು. ಅಂತ್ಯಕ್ರಿಯೆಯನ್ನು ಅಲ್ಲೇ ಮುಗಿಸಿದರು. ಬಳಿಕ ಅವರ ಹೆಂಡ್ತಿ, ಮಗ ಮತ್ತು ಮಗಳಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ವರದಿ ನೆಗೆಟಿವ್ ಬಂದಿತ್ತು.
ಗೋದಾವರಿಗೆ ಹಾರಿದ ಕುಟುಂಬ!
ಮನೆ ಯಜಮಾನನನ್ನು ಕಳೆದುಕೊಂಡ ಕುಟುಂಬಸ್ಥರು ತೀವ್ರವಾಗಿ ಮನ ನೊಂದಿದ್ದರು. ಮಂಗಳವಾರ ರಾತ್ರಿ 11 ಗಂಟೆಗೆ ಕೊವ್ವೂರು ಸೇತುವೆ ಮೇಲಿಂದ ಗೋದಾವರಿ ನದಿಗೆ ಹಾರಿ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪೊಲೀಸರಿಗೆ ಮಾಹಿತಿ ನೀಡಿದ ಗ್ರಾಮಸ್ಥರು...
ಹೊರಗಡೆ ಹೋದ ಕುಟುಂಬ ತುಂಬಾ ಹೊತ್ತಾದರೂ ವಾಪಸಾಗದ ಹಿನ್ನೆಲೆ ಗ್ರಾಮಸ್ಥರಿಗೆ ಅನುಮಾನ ಮೂಡಿತ್ತು. ಕೂಡಲೇ ಗ್ರಾಮಸ್ಥರು ಅವರಿಗಾಗಿ ಶೋಧ ನಡೆಸಿದ್ದರು. ಸೇತುವೆ ಬಳಿ ಕಾರು ಕಂಡು ಸ್ಥಳೀಯ ಪೊಲೀಸ್ ಠಾಣೆಗೆ ಗ್ರಾಮಸ್ಥರು ಮಾಹಿತಿ ರವಾನಿಸಿದರು.
ಅಜ್ಜ-ಅಜ್ಜಿ, ಮಾವಯ್ಯ ನಮ್ಮನ್ನು ಕ್ಷಮಿಸಿ...
ಸುದ್ದಿ ತಿಳಿದ ಪೊಲೀಸರು ಸೇತುವೆ ಬಳಿ ದೌಡಾಯಿಸಿದ್ದರು. ಕಾರು ಪರಿಶೀಲಿಸಿದಾಗ ಡೈರಿಯೊಂದು ಪತ್ತೆಯಾಗಿತ್ತು. ಡೈರಿಯಲ್ಲಿ ಅಜ್ಜಿ, ಅಜ್ಜ ಮತ್ತು ಮಾವಯ್ಯ ನಮ್ಮನ್ನು ಕ್ಷಮಿಸಿ. ತಂದೆ ಬಿಟ್ಟು ನಾವು ಬದುಕಿರಲಾರೆವು. ಮಾವಯ್ಯ ಅಜ್ಜ-ಅಜ್ಜಿಯನ್ನು ಕಾಳಜಿಯಿಂದ ನೋಡಿಕೊಳ್ಳಿ ಎಂದು ಡೈರಿಯಲ್ಲಿ ಬರೆದಿತ್ತು.
ಅನ್ಯೋನ್ಯವಾಗಿದ್ದ ಕುಟುಂಬ...
ಕ್ರಮಶಿಕ್ಷಣ, ಆಧ್ಯಾತ್ಮಿಕ ಭಾವನೆಯಿಂದ ನರಸಿಂಹರಾವ್ ಅಂದ್ರೆ ಪತ್ನಿ ಸುನೀತಾಗೆ ಪ್ರಾಣವಾಗಿದ್ದರು. ಎಲ್ಲಿಗಾದ್ರೂ ತೆರಳಬೇಕಾದ್ರೆ ಇಬ್ಬರೂ ಜೊತೆಗೂಡಿಯೇ ಹೋಗುತ್ತಿದ್ದರು. ಮಕ್ಕಳಾದ ಫಣಿಕುಮಾರ್ ಮತ್ತು ಲಕ್ಷ್ಮೀ ಅರ್ಪಣಾಗೆ ತಂದೆ ಅಂದ್ರೆ ತುಂಬಾನೇ ಪ್ರೀತಿ. ಅವರೆಲ್ಲೇ ಇದ್ರೂ ತಂದೆ ಹತ್ತಿರ ಮಾತನಾಡಲಿಲ್ಲವೆಂದ್ರೆ ಆ ದಿನ ಸಂಪೂರ್ಣವಾಗುತ್ತಿರಲಿಲ್ಲ. ಅನ್ಯೋನ್ಯವಾಗಿದ್ದ ಕುಟುಂಬದಲ್ಲಿ ಕೊರೊನಾ ಹೆಮ್ಮಾರಿಯಾಗಿ ಆಟ ಆಡಿದೆ. ತಂದೆ ಬಿಟ್ಟಿರಲಾರದೇ ತೆಗೆದುಕೊಂಡ ದುಡುಕು ನಿರ್ಧಾರ ಮೂವರ ಆತ್ಮಹತ್ಯೆಗೆ ದಾರಿ ಮಾಡಿಕೊಟ್ಟಿದೆ.
ಶವಕ್ಕಾಗಿ ಶೋಧ...
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೂವರ ಮೃತದೇಹ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.