ನವದೆಹಲಿ: ಸತತವಾಗಿ ಮೂರನೇ ತಿಂಗಳು ಭಾರತದ ರಫ್ತು ಪ್ರಮಾಣ ಕುಸಿತದತ್ತ ಸಾಗಿದ್ದು, ಮೇ ತಿಂಗಳಲ್ಲಿ ರಫ್ತು ಪ್ರಮಾಣ ಶೇ 36.47 ರಷ್ಟು ಇಳಿಕೆಯಾಗಿ 19.05 ಬಿಲಿಯನ್ ಡಾಲರ್ಗಳಿಗೆ ತಲುಪಿದೆ. ಪ್ರಮುಖ ವಲಯದ ಸರಕುಗಳಾದ ಪೆಟ್ರೋಲಿಯಂ, ಜವಳಿ, ಎಂಜಿನೀಯರಿಂಗ್, ವಜ್ರ ಹಾಗೂ ಒಡವೆಗಳ ಸಾಗಾಟ ಇಳಿಕೆಯಿಂದ ರಫ್ತು ಕುಂಠಿತವಾಗಿದೆ.
ಆಮದು ಪ್ರಮಾಣ ಸಹ ಶೇ 51 ರಷ್ಟು ತಗ್ಗಿದ್ದು, ಮೇ ನಲ್ಲಿ 22.2 ಬಿಲಿಯನ್ ಡಾಲರ್ಗಳಷ್ಟಿದೆ. ಕಳೆದ ವರ್ಷದ ಇದೇ ತಿಂಗಳಿನಲ್ಲಿ ಆಗಿದ್ದ 15.36 ಬಿಲಿಯನ್ ಡಾಲರ್ಗಳಿಗೆ ಹೋಲಿಸಿದರೆ ಪ್ರಸಕ್ತ ಮೇ ತಿಂಗಳಲ್ಲಿ 3.15 ಬಿಲಿಯನ್ ಡಾಲರ್ನಷ್ಟು ವ್ಯಾಪಾರ ಕೊರತೆ ಉಂಟಾಗಿದೆ ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ತಿಳಿಸಿದೆ.
ಏಪ್ರಿಲ್-ಮೇ 2020 ರ ಅವಧಿಯಲ್ಲಿ ರಫ್ತು ಶೇ 47.54 ರಷ್ಟು ಕುಸಿದು 29.41 ಬಿಲಿಯನ್ ಡಾಲರ್ಗಳಷ್ಟಿದೆ. ಹಾಗೆಯೇ ಆಮದು ಪ್ರಮಾಣವು ಶೇ 5.67 ರಷ್ಟು ಕುಸಿದು 439.32 ಬಿಲಿಯನ್ಗೆ ತಲುಪಿವೆ. ಪ್ರಸಕ್ತ ವಿತ್ತೀಯ ವರ್ಷದ ಎರಡು ತಿಂಗಳಲ್ಲಿ ವ್ಯಾಪಾರ ಕೊರತೆ 9.91 ಬಿಲಿಯನ್ ಡಾಲರ್ಗಳಷ್ಟಿದೆ.
ತೈಲ ಉತ್ಪನ್ನಗಳ ಆಮದು ಪ್ರಮಾಣವು ಮೇ ತಿಂಗಳಲ್ಲಿ 3.49 ಬಿಲಿಯನ್ ಡಾಲರ್ಗಳಷ್ಟಿತ್ತು. ಕಳೆದ ವರ್ಷದ ಇದೇ ತಿಂಗಳಲ್ಲಿ ಆಗಿದ್ದ 12.44 ಬಿಲಿಯನ್ ಡಾಲರ್ಗಳಿಗೆ ಹೋಲಿಸಿದರೆ ಶೇ 71.98 ರಷ್ಟು ಕುಸಿತವಾಗಿದೆ.
ದೇಶದ ಸೇವಾಕ್ಷೇತ್ರ ವಲಯದ ರಫ್ತು ಪ್ರಮಾಣ ಸಹ ಏಪ್ರಿಲ್ನಲ್ಲಿ ಶೇ 8.92 ರಷ್ಟು ಕುಸಿದು 16.45 ಬಿಲಿಯನ್ ಡಾಲರ್ಗಳಷ್ಟಿದೆ (ಸುಮಾರು 1.25 ಲಕ್ಷ ಕೋಟಿ ರೂ.) ಎಂದು ಆರ್ಬಿಐ ಹೇಳಿದೆ. ಚಿನ್ನಾಭರಣಗಳ ಆಮದು ಪ್ರಮಾಣ ಮೇ ನಲ್ಲಿ 98.4 ರಷ್ಟು ಕುಸಿದು 76.32 ಮಿಲಿಯನ್ ಡಾಲರ್ಗಳಷ್ಟಿದೆ.