ನವದೆಹಲಿ: ಚಾಣಕ್ಯಪುರಿಯ ಖಾಸಗಿ ಶಾಲೆಯ ಶಿಕ್ಷಣ ಶುಲ್ಕ ಹೆಚ್ಚಳಕ್ಕೆ ನೀಡಿದ್ದ ಅನುಮತಿಯನ್ನು ದೆಹಲಿ ಸರ್ಕಾರ ರದ್ದುಪಡಿಸಿದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಲೆಯ ಶುಲ್ಕ ಹೆಚ್ಚಳಕ್ಕೆ ನೀಡಲಾಗಿದ್ದ ಅನುಮತಿಯನ್ನು ರದ್ದುಪಡಿಸಲಾಗಿದೆ. ಅನುಮತಿ ನೀಡುವಾಗ ಕೆಲವೊಂದು ವಿಚಾರಗಳನ್ನು ನಿರ್ಲಕ್ಷಿಸಿರುವುದು ಕಂಡುಬಂದಿದೆ ಎಂದು ಸಿಸೋಡಿಯಾ ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೂ ಮೊದಲು ಚಾಣಕ್ಯಪುರಿ ಶಾಲೆಯ ವಿದ್ಯಾರ್ಥಿಗಳ ಹಾಗೂ ಪೋಷಕರ ಗುಂಪು ಸಿಸೋಡಿಯಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತ್ತು. ಈ ವೇಳೆ ಕೊರೊನಾ ವೇಳೆ ಶಿಕ್ಷಣ ಶುಲ್ಕ ಹೆಚ್ಚಿಸಲು ಯಾವುದೇ ಅವಕಾಶವಿಲ್ಲ. ಅನುಮತಿ ನೀಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೊರೊನಾ ವೇಳೆಯಲ್ಲಿ ಯಾವುದೇ ಶಾಲೆಗೆ ಶುಲ್ಕ ಹೆಚ್ಚಿಸಲು ಅನುಮತಿ ಇಲ್ಲ ಎಂದು ಈಗಾಗಲೇ ತಿಳಿಸಿದ್ದೇವೆ. ಈಗ ಪ್ರಸ್ತುತ ಶಾಲೆಗಳಿಗೆ ಟ್ಯೂಷನ್ ಶುಲ್ಕ ತೆಗೆದುಕೊಳ್ಳಲು ಅನುಮತಿ ನೀಡಲಾಗಿದೆ. ಅದರ ಹೊರತಾಗಿ ಯಾವುದೇ ಶುಲ್ಕವನ್ನು ಶಾಲೆಗಳು ತೆರೆಯುವವರೆಗೆ ವಿಧಿಸುವಂತಿಲ್ಲ ಎಂದು ಶಿಕ್ಷಣ ಸಚಿವರೂ ಆಗಿರುವ ಸಿಸೋಡಿಯಾ ಪುನರುಚ್ಚರಿಸಿದರು.
ದೇಶದಲ್ಲಿ ಕೊರೊನಾ ವೇಳೆ ಹಲವು ಶಾಲೆಗಳು ಶುಲ್ಕ ಹೆಚ್ಚಿಸುತ್ತಿದ್ದು, ಪೋಷಕರು ಹಾಗೂ ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ.