ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಓರ್ವ ಅಪರಾಧಿ ವಿನಯ್ ಶರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ಪುರಸ್ಕರಿಸಲು ದೆಹಲಿ ಸರ್ಕಾರ ನಿರಾಕರಿಸಿದೆ.
ಈ ಹಿಂದೆ ಪ್ರಕರಣದಲ್ಲಿ ಕ್ಷಮೆ ನೀಡುವಂತೆ ಕೋರಿ ಅಪರಾಧಿ ವಿನಯ್ ಶರ್ಮಾ ಸಲ್ಲಿಸಿದ್ದ ಮೇಲ್ಮನವಿಯನ್ನು ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು ಮತ್ತು ಈ ವಿಷಯದಲ್ಲಿ ವಿಚಾರಣಾ ನ್ಯಾಯಾಲಯವು ನೀಡಿರುವ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು. ಇದೀಗ ದೆಹಲಿ ಸರ್ಕಾರ, ಅಪರಾಧಿಗೆ ಕ್ಷಮೆ ನೀಡದಂತೆ ಶಿಫಾರಸು ಮಾಡಿದೆ.
![Nirbhaya gang rape case](https://etvbharatimages.akamaized.net/etvbharat/prod-images/5237618_su.jpg)
ಈ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಸರ್ಕಾರದ ಗೃಹ ಸಚಿವ ಸತ್ಯೇಂದರ್ ಜೈನ್, ನಿರ್ಭಯಾ ಅತ್ಯಾಚಾರ ಹಾಗೂ ಕೊಲೆಯು ಇದು ಅರ್ಜಿದಾರನು ಮಾಡಿದ ಅತ್ಯಂತ ಘೋರ ಅಪರಾಧ. ಇಂತಹ ದುಷ್ಕೃತ್ಯಗಳು ಮತ್ತೆ ನಡೆಯದಂತೆ ತಡೆಯಲು ಕಠಿಣ ಶಿಕ್ಷೆಯನ್ನು ನೀಡಬೇಕಾದ ಸಂದರ್ಭ ಇದು. ಕ್ಷಮಾದಾನ ಅರ್ಜಿ ಸಲ್ಲಿಸಲು ಅಪರಾಧಿಗೆ ಯಾವುದೇ ಅರ್ಹತೆಯಿಲ್ಲ. ಹೀಗಾಗಿ ಅರ್ಜಿಯನ್ನು ತಿರಸ್ಕರಿಸಲು ಬಲವಾಗಿ ಶಿಫಾರಸು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸದ್ಯ ಅರ್ಜಿಯನ್ನು ದೆಹಲಿಯ ಲೆಫ್ಟಿನೆಂಟ್-ಗವರ್ನರ್ ಪರಿಗಣನೆಗೆ ಇಟ್ಟು, ನಂತರ ಅದನ್ನು ಕೇಂದ್ರ ಸರ್ಕಾರದ ಗೃಹ ವ್ಯವಹಾರ ಸಚಿವಾಲಯಕ್ಕೆ ಕಳುಹಿಸಲಾಗುವುದು.
ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯ ಪ್ರಕರಣ:
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯ ಘಟನೆ 2012ರ ಡಿಸೆಂಬರ್ 16 ರಂದು ನಡೆದಿತ್ತು. 17 ವರ್ಷದ ಅಪ್ರಾಪ್ತ ವಯಸ್ಕ ಸೇರಿ 6 ಮಂದಿ ಯುವಕರು 23 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಚಲಿಸುವ ಬಸ್ಸಿನಲ್ಲೇ 'ಅತ್ಯಂತ ಅಮಾನವೀಯವಾಗಿ' ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಯುವತಿ ಹಾಗೂ ಆಕೆಯ ಸ್ನೇಹಿತ ಸಿನಿಮಾ ವೀಕ್ಷಿಸಿ ಮನೆಗೆ ವಾಪಸಾಗುತ್ತಿದ್ದಾಗ ಕಾಮುಕರು ಆಕೆಯ ಮೇಲೆ ಪೈಶಾಚಿಕ ಕೃತ್ಯ ಎಸಗಿದ್ದರು.
ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿ, 2012ರ ಡಿಸೆಂಬರ್ 29 ರಂದು ಸಿಂಗಾಪುರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಪ್ರಕರಣದಲ್ಲಿ ದೋಷಿಗಳಾದ ಅಕ್ಷಯ್, ಪವನ್, ವಿನಯ್ ಶರ್ಮಾ ಮತ್ತು ಮುಖೇಶ್ ತಮಗೆ ದಿಲ್ಲಿ ಹೈಕೋರ್ಟ್ ವಿಧಿಸಿದ್ದ ಮರಣ ದಂಡನೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ದಿಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿತ್ತು.