ಕೇಪ್ಟೌನ್, ದಕ್ಷಿಣ ಆಫ್ರಿಕಾ: ಭಾರತದಲ್ಲಿ ನಡೆಯಬೇಕಿದ್ದ ಏಕದಿನ ಕ್ರಿಕೆಟ್ ಪಂದ್ಯಗಳು ರದ್ದಾದ ಕಾರಣದಿಂದ ತಮ್ಮ ದೇಶಕ್ಕೆ ಮರಳಿರುವ ದಕ್ಷಿಣ ಆಫ್ರಿಕಾ ಆಟಗಾರರು ತಮ್ಮ ಆರೋಗ್ಯದ ಮೇಲೆ ಸ್ವಯಂ ನಿಗಾ ವಹಿಸಬೇಕೆಂದು ಅಲ್ಲಿನ ಕ್ರಿಕೆಟ್ ಆಡಳಿತ ಮಂಡಳಿ ಸೂಚಿಸಿದೆ.
ಕೊರೊನಾ ಭೀತಿಯಿಂದ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಪಂದ್ಯಗಳು ರದ್ದಾಗಿದ್ದವು. ಇದರಿಂದಾಗಿ ಆಟಗಾರರು ತಮ್ಮ ತವರಿಗೆ ಮರಳಿದ್ದರು. ಭಾರತದಲ್ಲಿ ಕೊರೊನಾ ಸೋಂಕು ಹಾವಳಿಯಿಂದಾಗಿ ಎಲ್ಲಾ 16 ಆಟಗಾರರು ತಮ್ಮ ಆರೋಗ್ಯದ ಮೇಲೆ ತೀವ್ರ ನಿಗಾ ಇಟ್ಟುಕೊಳ್ಳಬೇಕೆಂದು ಕ್ರಿಕೆಟ್ ಸೌಥ್ ಆಫ್ರಿಕಾ(ಸಿಎಸ್ಎ) ಸೂಚಿಸಿದೆ.
ಎಲ್ಲಾ ಆಟಗಾರರು ಸುಮಾರು 14 ದಿನಗಳ ಕಾಲ ತಮಗೆ ತಾವೇ ಎಚ್ಚರಿಕೆಯಿಂದ ಇರಬೇಕು. ಈ ವೇಳೆ ಸೋಂಕು ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಬೇಕೆಂದು ಸಿಎಸ್ಎ ಮುಖ್ಯ ವೈದ್ಯಾಧಿಕಾರಿ ಶುಯೈಬ್ ಮಂಜ್ರಾ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ಹಾಗೂ ಭಾರತದ ನಡುವಿನ ಮೊದಲ ಏಕದಿನ ಪಂದ್ಯ ಮಳೆಯ ಕಾರಣಕ್ಕೆ ರದ್ದಾಗಿತ್ತು. ನಂತರದ ಪಂದ್ಯಗಳು ಕೊರೊನಾ ಭೀತಿಯಿಂದ ರದ್ದಾಗಿದ್ದವು.