ಪಣಜಿ: ಉತ್ತರ ಕೊರಿಯಾದ ರೋಗಿ ನಂ.31 ಏನು ಮಾಡಿದ್ದ ಎಂಬುದು ಎಲ್ಲರಿಗೂ ಗೊತ್ತಿರಬಹುದು. ಆ ದೇಶದಲ್ಲಿ ಕೊರೊನಾದಿಂದ ಸೋಂಕಿತನಾದ 31ನೇ ವ್ಯಕ್ತಿಯೊಬ್ಬ ಸಾವಿರಾರು ಜನರಿಗೆ ಸೋಂಕು ತಗುಲಿಸಿದ್ದ. ಈಗ ಅಂಥದೇ ಘಟನೆಯೊಂದು ಗೋವಾದಲ್ಲಿ ನಡೆದಿದೆ.
ಅಮೆರಿಕದಿಂದ ಮರಳಿದ್ದ 55 ವರ್ಷದ ವ್ಯಕ್ತಿಯೊಬ್ಬರನ್ನು ಪರೀಕ್ಷಿಸಿ ಪಣಜಿ ಬಳಿಯ ಐಸೊಲೇಷನ್ ಕೇಂದ್ರದಿಂದ ಮಾ.25 ರಂದು ಬಿಡುಗಡೆ ಮಾಡಲಾಗಿತ್ತು. ಆದರೆ ಯಾವುದೋ ಸಂಶಯದಿಂದ ಮತ್ತೆ ಆತನನ್ನು ಕರೆಸಿ ಪರೀಕ್ಷೆ ಮಾಡಿದಾಗ ಕೋವಿಡ್-19 ಪಾಸಿಟಿವ್ ಎಂಬುದು ದೃಢಪಟ್ಟಿದೆ. ಆದರೆ ಇಷ್ಟರಲ್ಲಿ ಆಗಬಾರದ್ದು ಆಗಿ ಹೋಗಿತ್ತು.
ಆತನನ್ನು ಮರಳಿ ಕರೆತರುವಷ್ಟರಲ್ಲಿ ಆತ ಭೇಟಿ ಮಾಡಿದ್ದು ಬರೋಬ್ಬರಿ 20 ಜನರನ್ನು. ಈ ವ್ಯಕ್ತಿ ಮಾತ್ರವಲ್ಲದೇ ವಿದೇಶದಿಂದ ಗೋವಾಕ್ಕೆ ಮರಳಿದ್ದ ಇನ್ನಿಬ್ಬರು ಸಹ ತಮ್ಮ ಪ್ರಯಾಣ ವಿವರಗಳನ್ನು ಮುಚ್ಚಿಟ್ಟಿದ್ದ ವಿವರ ಬಹಿರಂಗವಾಗಿದೆ. ಈ ಇಬ್ಬರೂ ಸಹ ಕೋವಿಡ್ ಪಾಸಿಟಿವ್ ಆಗಿದ್ದು, ಒಟ್ಟಾರೆ ಈ ಮೂವರು 42 ಜನರನ್ನು ಭೇಟಿ ಮಾಡಿರುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ತಿಳಿಸಿದ್ದಾರೆ. ಈಗ ಈ ತ್ರಿವಳಿ ಸೋಂಕಿತರ ಕೃತ್ಯದಿಂದ ಮಹಾಮಾರಿ ಗೋವಾದ ಹಲವಾರು ಜನರಿಗೆ ಹರಡುವ ಭೀತಿ ಆವರಿಸಿದೆ.