ನವದೆಹಲಿ: ಹಸಿರು ವಲಯಗಳು ಅಥವಾ ಕಡಿಮೆ ಜನಸಂಖ್ಯೆ ಹೊಂದಿರುವ ಕೋವಿಡ್ -19 ಪ್ರಕರಣಗಳಿಲ್ಲದ ಪ್ರದೇಶಗಳಲ್ಲಿ ಕನಿಷ್ಠ ನಿರ್ಬಂಧಗಳೊಂದಿಗೆ ಲಾಕ್‌ಡೌನ್ ಆದೇಶವನ್ನು ಸಡಿಸಲಿಸುವ ಸುಳಿವನ್ನು ಮೋದಿ ನೀಡಿದ್ದಾರೆ. ಆದರೆ, ಕೆಂಪು ವಲಯಗಳಾದ ದೆಹಲಿ,ಮುಂಬೈ ಮತ್ತು ಅಹಮದಾಬಾದ್‌ನಂತಹ ಪ್ರಮುಖ ನಗರಗಳನ್ನು ಲಾಕ್‌ಡೌನ್ ಆದೇಶ ಕಠಿಣವಾಗೇ ಮುಂದುವರೆಯಲಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಲಾಕ್‌ಡೌನ್ ವಿಚಾರ ಪ್ರಸ್ತಾಪವಾಯಿತು. ಕೆಲವು ಪ್ರದೇಶಗಳಲ್ಲಿ ನಿರ್ಬಂಧಗಳನ್ನು ಸಡಿಲಗೊಳಿಸುವುದರ ಜೊತೆಗೆ ಲಾಕ್ಡೌನ್ನ್ನು ಮುಂದುವರೆಸಿಕೊಂಡು ಹೋಗುವ ಬಗ್ಗೆ ಚರ್ಚೆ ಆಯಿತು. ಈಶಾನ್ಯ ರಾಜ್ಯಗಳ ಸಿಎಂಗಳು, ಹಿಮಾಚಲ, ಉತ್ತರಾಖಂಡ ಮತ್ತು ಒಡಿಶಾ, ಬಿಹಾರದಂತಹ ಪ್ರದೇಶಗಳಲ್ಲಿ ಕೆಲವು ಹೊಸ ಪ್ರಕರಣಗಳು ಮತ್ತು ಹಾಟ್‌ಸ್ಪಾಟ್‌ಗಳನ್ನು ಪ್ರತಿದಿನ ಗುರುತಿಸಲಾಗುವುದು ಎಂದು ತಿಳಿಸಿದ ಅವರು, ಲಾಕ್‌ಡೌನ್ ಅನ್ನು ತೆಗೆದುಹಾಕುವುದು ಬೇಡ. ಜೀವಗಳನ್ನು ಉಳಿಸುವತ್ತ ಗಮನ ಹರಿಸಬೇಕಿದೆ ಎಂದರು.
ಇನ್ನು ಹಾಟ್ ಸ್ಪಾಟ್‌ಗಳಲ್ಲಿ ಕಟ್ಟುನಿಟ್ಟಾಗಿ ಮಾರ್ಗಸೂಚಿಗಳನ್ನು ಜಾರಿಗೊಳಿಸುವ ಸಂಬಂಧ ಮಾತನಾಡಿದ ಮೋದಿ, ಕೆಂಪು ವಲಯಗಳನ್ನು ಹಳದಿ ವಲಯಕ್ಕೆ ಪರಿವರ್ತಿಸುವ ಹಾಗೂ ಹಳದಿ ವಲಯವನ್ನು ಹಸಿರು ವಲಯಗಳಾಗಿ ಪರಿವರ್ತಿಸುವತ್ತ ಪ್ರಯತ್ನಿಸಬೇಕು. ಲಾಕ್ ಡೌನ್ ಸಕಾರಾತ್ಮಕ ಫಲಿತಾಂಶಗಳನ್ನು ನೀಡಿದೆ. ಈ ಹಿನ್ನೆಲೆ ಮುಂದಿನ ಸ್ಥಿತಿಗತಿ ಬಗ್ಗೆ ಯೋಚಿಸುವ ಅವಶ್ಯಕತೆಯಿದೆ. ಕಳೆದ ಒಂದೂವರೆ ತಿಂಗಳಲ್ಲಿ ಸಾವಿರಾರು ಜೀವಗಳನ್ನು ಉಳಿಸುವಲ್ಲಿ ಲಾಕ್‌ಡೌನ್ ಕ್ರಮ ಯಶಸ್ವಿಯಾಗಿದೆ ಎಂದು ಪ್ರಧಾನಿ ಈ ಬಗ್ಗೆ ಒತ್ತಿ ಹೇಳಿದರು.
ಇಷ್ಟಲ್ಲಾ ಮಾಡಿದರೂ ಕೊರೊನಾ ಭೀತಿ ಮುಗಿದಿಲ್ಲ ಎಂದು ಎಚ್ಚರಿಸಿರುವ ಪ್ರಧಾನಿ, ತಜ್ಞರ ಪ್ರಕಾರ, ಕೊರೊನಾ ವೈರಸ್ ಪರಿಣಾಮವು ಮುಂದಿನ ತಿಂಗಳುಗಳಲ್ಲಿ ಹೆಚ್ಚಾಗಿ ಗೋಚರಿಸುತ್ತದೆ ಈ ಹಿನ್ನೆಲೆ ಸಾಮಾಜಿಕ ಅಂತರ ಅಗತ್ಯ. ಮಾಸ್ಕ್ ಮುಂದಿನ ದಿನಗಳಲ್ಲಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗುತ್ತವೆ ಎಂದು ಹೇಳಿದರು.
ನಾವು ಆರ್ಥಿಕತೆಗೆ ಪ್ರಾಮುಖ್ಯತೆ ನೀಡಬೇಕು ಜೊತೆಗೆ ಕೋವಿಡ್ -19 ವಿರುದ್ಧದ ಹೋರಾಟವನ್ನು ಮುಂದುವರಿಸಬೇಕಾಗಿದೆ. ಗೃಹಸಚಿವಾಲಯವು ಲಾಕ್‌ಡೌನ್ ಮಾರ್ಗಸೂಚಿಗಳನ್ನು ಪರಿಶೀಲಿಸುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ನಗರದ ಪ್ರದೇಶದಲ್ಲಿನ ಮಾರುಕಟ್ಟೆಗಳಿಗೆ ವಿಧಿಸಿರುವ ನಿರ್ಬಂಧವನ್ನು ಪರಿಶೀಲಿಸಬಹುದು ಎಂದರು.