ಕೊಯಮತ್ತೂರು : ತಮಿಳುನಾಡಿನ ಕೊಯಮತ್ತೂರು ಅರಣ್ಯ ವಿಭಾಗದ ಸಿರುಮುಗೈ ಅರಣ್ಯ ವ್ಯಾಪ್ತಿಯಲ್ಲಿ ಗುರುವಾರ ಹೆಣ್ಣಾನೆಯ ಮೃತದೇಹ ಪತ್ತೆಯಾಗಿದೆ.
ಮೂಲೈಯೂರ್‌ನಿಂದ ಮಾಯಿಲ್‌ಮೊಕ್ಕೈವರೆಗಿನ ಕಾಡಿನಲ್ಲಿ ಗಸ್ತು ತಿರುಗುತ್ತಿದ್ದ ಅರಣ್ಯ ಇಲಾಖೆಯ ನಾಲ್ವರು ಸದಸ್ಯರ ತಂಡಕ್ಕೆ ಕೆಟ್ಟ ವಾಸನೆ ಕಂಡು ಬಂದಿದ್ದು, ಸ್ಥಳದಲ್ಲಿ ಆನೆಗಳ ಹಿಂಡು ಸುತ್ತುವರೆದಿದ್ದರಿಂದ ಗಸ್ತು ತಂಡಕ್ಕೆ ಆನೆ ಮೃತದೇಹವಿದ್ದ ಸ್ಥಳಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ.
ಗುರುವಾರ ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ ಗಸ್ತು ತಂಡಕ್ಕೆ ಮೃತದೇಹ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದ್ದು, ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಕನಿಷ್ಠ 8 ರಿಂದ 10 ದಿನಗಳ ಹಿಂದೆಯೇ ಆನೆ ಸತ್ತಿರಬೇಕು ಎಂದು ಪಶುವೈದ್ಯರು ಊಹಿಸಿದ್ದಾರೆ. ಆನೆಯ ವಯಸ್ಸು ಸುಮಾರು 47 ರಿಂದ 49 ವರ್ಷಗಳಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶವದಿಂದ ಮಾದರಿಯನ್ನು ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿಯಿಂದ ಇಲ್ಲಿಯವರೆಗೆ ಐದು ಅರಣ್ಯ ವಿಭಾಗಗಳ ವ್ಯಾಪ್ತಿಯಲ್ಲಿ 10 ನೇ ಆನೆ ಸಾವಿನ ಪ್ರಕರಣ ಇದಾಗಿದೆ. ಸಿರುಮುಗೈ ಅರಣ್ಯ ಪ್ರದೇಶ ಒಂದರಲ್ಲೇ ಆರು ಆನೆಗಳು ಸಾವಿಗೀಡಾಗಿವೆ.