ಬೀಜಿಂಗ್(ಚೀನಾ): ಮಹಾಮಾರಿ ಕೊರೊನಾಗೆ ಚೀನಾ ಅಕ್ಷರಶಃ ನಲುಗಿದೆ. ಸಾವನ್ನಪ್ಪಿರುವವರ ಸಂಖ್ಯೆ ಇದೀಗ 1,500ರ ಗಡಿ ದಾಟಿದ್ದು, ಗುರುವಾರ ಒಂದೇ ದಿನದಲ್ಲಿ 254 ಜನರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾಗಿ ವರದಿಯಾಗಿದೆ.
ನಿನ್ನೆ ಒಂದೇ ದಿನ 4,823 ಹೊಸ ಪ್ರಕರಣಗಳು ಕಂಡು ಬಂದಿದ್ದು, ಚೀನಾದಲ್ಲಿ ಈವರೆಗೆ ಒಟ್ಟು 64,627 ಮಂದಿಯಲ್ಲಿ ವೈರಸ್ ಸೋಂಕು ಇರುವುದು ಕಂಡು ಬಂದಿದೆ. ಸಾವು-ನೋವಿನಲ್ಲಿ ಸಾರ್ಸ್ ಸೋಂಕನ್ನು ಮೀರಿಸಿರುವ ಕೊರೊನಾವನ್ನು ಹತೋಟಿಗೆ ತರಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದ್ರೂ ಇಲ್ಲಿಯವರೆಗೆ ಅದು ನಿಯಂತ್ರಣಕ್ಕೆ ಬಂದಿಲ್ಲ.
ಹುಬೈ ಪ್ರಾಂತದಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬರುತ್ತಿದ್ದು, ಸೋಂಕು ತಗುಲಿರುವ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಸಾಂಕ್ರಾಮಿಕ ರೋಗ ತಡೆಗಟ್ಟಲು ವಿಶ್ವ ಆರೋಗ್ಯ ಸಂಸ್ಥೆ ನೇತೃತ್ವದ ತಜ್ಞರ ತಂಡ ಈಗಾಗಲೇ ಬೀಜಿಂಗ್ಗೆ ತೆರಳಿದ್ದು, ಸೂಕ್ತ ಕಾರ್ಯ ನಿರ್ವಹಿಸುತ್ತಿದೆ.
ಈ ಮಹಾಮಾರಿಯನ್ನು ತಡೆಗಟ್ಟಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದ್ದು, ವೈರಸ್ ಕಾಣಿಸಿಕೊಂಡಿರುವ ಕೆಲವರು ಚೇತರಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದು ಬಂದಿದೆ.