ಅಯೋಧ್ಯೆ: ಬಹುನಿರೀಕ್ಷಿತ ರಾಮ ಮಂದಿರದ ನಿರ್ಮಾಣಕ್ಕಾಗಿ ಕೆತ್ತಿದ ಕಲ್ಲುಗಳು ಇದೀಗ ರಾಮ ಜನ್ಮಭೂಮಿ ಸ್ಥಳವನ್ನು ತಲುಪಲು ಸಿದ್ಧವಾಗಿವೆ.
ಭವ್ಯ ರಾಮ ಮಂದಿರದ ನಿರ್ಮಾಣದ ಮೇಲ್ವಿಚಾರಣೆಗಾಗಿ ಸ್ಥಾಪಿಸಲಾದ ಶ್ರೀ ರಾಮ ಜನಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮುಖ್ಯಸ್ಥ ಮಹಂತ್ ಗೋಪಾಲ್ ದಾಸ್ ಮೇ 25ರಂದು ದೇವಾಲಯದ ನಿರ್ಮಾಣ ಪ್ರಾರಂಭವಾಗಿದೆ ಎಂದು ಘೋಷಿಸಿದ್ದರು.
ರಾಮ ಮಂದಿರ ನಿರ್ಮಾಣಕ್ಕಾಗಿ ಕಲ್ಲುಗಳ ಕೆತ್ತನೆಯನ್ನು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) 1990ರಲ್ಲಿ ರಾಮ ಮಂದಿರ ನಿರ್ಮಾಣ್ ಕಾರ್ಯಶಾಲೆಯಲ್ಲಿ ಪ್ರಾರಂಭಿಸಿತ್ತು. ನ್ಯಾಯಾಲಯದ ಆದೇಶದಿಂದ ಕಾಮಗಾರಿ ಸ್ಥಗಿತಗೊಂಡಿತ್ತಾದರೂ, 2019ರ ನವೆಂಬರ್ 9ರಂದು ಸುಪ್ರೀಂಕೋರ್ಟ್ ರಾಮ ಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿದ ಬಳಿಕ ಕೆತ್ತನೆ ಕಾರ್ಯ ಪುನಾರಂಭಗೊಂಡಿತ್ತು.
"ಪ್ರಸ್ತುತ ವಿವಿಧ ರಾಜ್ಯಗಳಿಂದ ಬಂದ ಕುಶಲಕರ್ಮಿಗಳು ಕಲ್ಲು ಕೆತ್ತನೆ ಮಾಡುವ ಕೆಲಸ ನಡೆಸುತ್ತಿದ್ದಾರೆ. ಒಂದು ಮಹಡಿಗೆ ಕಲ್ಲು ಕೆತ್ತನೆ ಪೂರ್ಣಗೊಂಡಿದೆ. ಟ್ರಸ್ಟ್ ಸೂಚನೆ ನೀಡಿದ ಕೂಡಲೇ ಹೆಚ್ಚಿನ ಕೆಲಸಗಳನ್ನು ಪ್ರಾರಂಭಿಸಲಾಗುವುದು" ಎಂದು ಮೇಲ್ವಿಚಾರಕರಾಗಿರುವ ಅನುಭಾಯಿ ಸೊಂಪುರಾ ಈ ಟಿವಿ ಭಾರತ್‌ಗೆ ತಿಳಿಸಿದರು.
ಅನುಭಾಯಿ ಸೊಂಪುರಾ ಅವರು ಕಳೆದ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ರಾಮ ಮಂದಿರದ ನಿರ್ಮಾಣ ಕಾರ್ಯಾಗಾರದಲ್ಲಿ ಕಲ್ಲಿನ ಕೆತ್ತನೆ ಕೆಲಸದ ಮೇಲ್ವಿಚಾರಕರಾಗಿದ್ದಾರೆ.