ಪಾಟ್ನಾ( ಬಿಹಾರ): ನೇಪಾಳ ಗಡಿಯ ಮೂಲಕ ತಾಲಿಬಾನ್ ಹಾಗೂ ಜೈಷ್ ಎ ಮೊಹಮ್ಮದ್ ಉಗ್ರರು ಬಿಹಾರಕ್ಕೆ ಬಂದಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲೆಗಳಲ್ಲಿ ಬಿಹಾರ ಸ್ಪೆಷಲ್ ಬ್ರಾಂಚ್ ಹೈ ಅಲರ್ಟ್ ಘೋಷಣೆ ಮಾಡಿ ಮುಂಜಾಗ್ರತೆ ವಹಿಸಿಕೊಳ್ಳುವಂತೆ ಸೂಚನೆ ನೀಡಿದೆ.
ಐಎಸ್ಐ ಐದಾರು ತಾಲಿಬಾನ್ ಹಾಗೂ ಜೈಷ್ ಉಗ್ರರನ್ನು ಭಾರತಕ್ಕೆ ಕಳುಹಿಸಲು ಸಂಚು ರೂಪಿಸಿದ್ದು, ಈ ಉಗ್ರರಿಗೆ ಪಾಕ್ ಸೇನೆಯಿಂದ ತರಬೇತಿ ನೀಡಲಾಗಿದೆ. ಇವರನ್ನು ನೇಪಾಳ ಗಡಿ ಭಾಗದಿಂದ ಭಾರತಕ್ಕೆ ತಲುಪಿಸಲು ಸಂಚು ನಡೆಸಲಾಗಿದೆ ಎಂದು ಬಿಹಾರ ಸ್ಪೆಷಲ್ ಬ್ರಾಂಚ್ ತಿಳಿಸಿದೆ.
ಎನ್ಐಎ ಕಂಟ್ರೋಲ್ ರೂಮ್ಗೆ ಇ -ಮೇಲ್ ಮೂಲಕ ಬೆದರಿಕೆ ಸಂದೇಶವೊಂದು ಬಂದಿದ್ದು, ಈ ಸಂದೇಶದಲ್ಲಿ ಕೇಂದ್ರ ಗೃಹ ಮಂತ್ರಿ ಸೇರಿದಂತೆ ಹಲವು ಬಿಜೆಪಿ ಮುಖಂಡರನ್ನು ಕೊಲೆ ಮಾಡುವ ಬೆದರಿಕೆಯಿದೆ. ಇದರಿಂದಾಗಿ ಕಾಶ್ಮೀರ ಭಯೋತ್ಪಾದಕರು, ಮುಸ್ಲಿಂ ಮೂಲಭೂತವಾದಿಗಳು, ಜೈಷ್ ಎ ಮೊಹಮದ್, ತಾಲಿಬಾನ್ನಂತಹ ಸಂಘಟನೆಗಳ ಮೇಲೆ ನಿಗಾ ಇಡಬೇಕಾಗಿದೆ ಎಂದು ಸ್ಪೆಷಲ್ ಬ್ರಾಂಚ್ ಎಚ್ಚರಿಸಿದೆ.
ಇದರ ಜೊತೆಗೆ ವಿವಿಐಪಿಗಳು ತಮ್ಮ ಜಿಲ್ಲೆಗಳಲ್ಲಿ ಪ್ರವಾಸ ಅಥವಾ ಕಾರ್ಯಕ್ರಮಗಳಿಗೆ ಆಗಮಿಸುವ ವೇಳೆ ಬಿಗಿ ಭದ್ರತೆ ಒದಗಿಸಬೇಕೆಂದೂ, ವಿವಿಐಪಿಗಳಿರುವ ಸ್ಥಳಗಳಲ್ಲಿ ಓಡಾಡುವ ಪ್ರತಿಯೊಬ್ಬ ವ್ಯಕ್ತಿಯ ಮೇಲೆಯೂ ತೀವ್ರ ನಿಗಾ ವಹಿಸಬೇಕೆಂದು ಸ್ಥಳೀಯ ಪೊಲೀಸರಿಗೆ ಸ್ಪೆಷಲ್ ಬ್ರಾಂಚ್ ಸೂಚನೆ ನೀಡಿದೆ.