ಬೆಂಗಳೂರು: ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸೌರವ್ ಗಂಗೂಲಿ ಈಗಾಗಲೇ ಭಾರತೀಯ ಕ್ರಿಕೆಟ್ನಲ್ಲಿ ಅನೇಕ ಬದಲಾವಣೆಗಳನ್ನು ತಂದಿದ್ದಾರೆ. ಇದೀಗ ಮತ್ತೊಂದು ಮಹತ್ವದ ಯೋಜನೆ ಹಾಕಿಕೊಂಡು ಕೋಟ್ಯಂತರ ರೂ. ವೆಚ್ಚ ಮಾಡಲು ಮುಂದಾಗಿದ್ದಾರೆ.
ಬೆಂಗಳೂರಿನಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಜತೆ(ಎನ್ಸಿಎ) ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ಅನ್ನು ಬೆಂಗಳೂರಿನಲ್ಲೇ ಅಂದಾಜು 500 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ಯೋಜನೆ ಸಿದ್ಧಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಮುಂದಿನ ಎರಡು ವರ್ಷಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಪರ್ಯಾಯವಾಗಿ ಈ ಸೆಂಟರ್ ಆಫ್ ಎಕ್ಸಲೆನ್ಸ್ ಕೆಲಸ ನಿರ್ವಹಿಸಲಿದ್ದು, ಇದರ ಉಸ್ತುವಾರಿಯನ್ನ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ನೋಡಿಕೊಳ್ಳಲಿದ್ದಾರೆ. ಇದರೊಂದಿಗೆ ಕೆಲ ವೈದ್ಯಕೀಯ ಸಂಸ್ಥೆಗಳು ಸಹ ಕೆಲಸ ಮಾಡಲಿವೆ. ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ವಿವಿಧ ದೇಶಗಳ ಮಾದರಿಯಲ್ಲಿ 4 ಮೈದಾನಗಳಿರಲಿದ್ದು, ಅದರೊಳಗೆ ಕ್ರಿಕೆಟರ್ಸ್ಗೆ ತರಬೇತಿ ನೀಡಲಾಗುವುದು.
ಈ ಸೆಂಟರ್ಗಾಗಿ ಈಗಾಗಲೇ ಬೆಂಗಳೂರಿನ ಹೊರವಲಯ ದೇವನಹಳ್ಳಿಯಲ್ಲಿ 40 ಎಕರೆ ಜಮೀನು ಖರೀದಿಸಲಾಗಿದ್ದು, ಅಲ್ಲೇ ಈ ಕೇಂದ್ರ ತಲೆ ಎತ್ತಲಿದೆ ಎಂದು ತಿಳಿದು ಬಂದಿದೆ.