ಶ್ರೀನಗರ: ಜಮ್ಮು-ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಗಿಳಿದ ಭದ್ರತಾ ಪಡೆ, ನಾಲ್ವರನ್ನು ಹೊಡೆದುರುಳಿಸಿದೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾದ ಲಸ್ಸಿಪೊರಾದಲ್ಲಿ ನಿನ್ನೆ ಸಂಜೆಯಿಂದಲೇ ಭಾರತೀಯ ಸೇನೆ, ಪೊಲೀಸರು ಹಾಗೂ ಸಿಆರ್ಪಿಎಫ್ ಪಡೆ ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿತು. ಉಗ್ರರು ಅಡಗಿರುವ ಖಚಿತ ಮಾಹಿತಿ ಆಧರಿಸಿ ಭದ್ರತಾ ಪಡೆ ದಾಳಿ ನಡೆಸಿದೆ. ಉಗ್ರರು ಹಾಗೂ ಭದ್ರತಾ ಪಡೆ ನಡುವೆ ನಿರಂತರವಾಗಿ ಗುಂಡಿನ ಕಾಳಗ ನಡೆದಿದೆ. ಇಂದು ಮೃತಪಟ್ಟ ಉಗ್ರರು ಜೈಷೆ ಮೊಹಮ್ಮದ್ ಸಂಘಟನೆಗೆ ಸೇರಿದವರು ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಮೂರು 3 AK ರೈಫಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಕಾರ್ಯಾಚರಣೆ ಮುಂದುವರೆದಿದೆ.
ನಿನ್ನೆ ಅನಂತನಾಗ್ ಜಿಲ್ಲೆಯಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ ಪರಿಣಾಮ ಆರ್ಮಿ ಜವಾನ್ ಮಂಜೂರ್ ಅಹ್ಮದ್ ಬೇಗ್ ಕೊನೆಯುಸಿರೆಳೆದಿದ್ದರು. ಇದಾದ ನಂತರ ಭದ್ರತಾ ಪಡೆ ಕಾರ್ಯಾಚರಣೆ ನಡೆಸಿ, ಉಗ್ರರನ್ನು ಮಟ್ಟ ಹಾಕಿದೆ.