ಮುಂಬೈ: ಸೇನಾ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸೇನೆಯ ಪ್ರಮುಖ ಹುದ್ದೆಯಲ್ಲಿದ್ದ ಅಧಿಕಾರಿಯನ್ನು ಪುಣೆ ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ. 45 ವರ್ಷದ ಅಧಿಕಾರಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಈತನ ಕೈವಾಡವಿದೆ ಎಂದು ಆರೋಪಿಸಿ ಬಂಧಿಸಲಾಗಿದೆ.
ತಮಿಳುನಾಡಿನ ವೆಲ್ಲಿಂಗ್ಟನ್ ಪಟ್ಟಣದಲ್ಲಿ ಆರೋಪಿಯ ಬಂಧನವಾಗಿದ್ದು, ಪುಣೆಗೆ ಕರೆತರಲಾಗಿದೆ. ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣ ಸಂಬಂಧ ಕಳೆದ ತಿಂಗಳು ದಾಖಲಾಗಿರುವ ಎಫ್ಐಆರ್ ಪ್ರಕಾರ, ಈಗಾಗಲೇ 8 ಮಂದಿ ಆರೋಪಿಗಳ ಬಂಧನವಾಗಿದ್ದು, ಇದೀಗ 9ನೇ ಆರೋಪಿಯ ಬಂಧನವಾಗಿದೆ.
ಫೆಬ್ರವರಿ 8ರಂದು ನಿಗದಿಯಾಗಿದ್ದ ಸೇನಾ ನೇಮಕಾತಿ ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಕಾರಣ ರದ್ದು ಮಾಡಲಾಗಿತ್ತು. ಸುಮಾರು 30 ಸಾವಿರ ಅಭ್ಯರ್ಥಿಗಳು ದೇಶದ ವಿವಿಧೆಡೆ ಪರೀಕ್ಷೆ ಎದುರಿಸಲು ಸಿದ್ಧತೆ ನಡೆಸಿದ್ದರು.
ಇದನ್ನೂ ಓದಿ: ಓವೈಸಿ-ದಿನಕರನ್ ಮೈತ್ರಿ ಸಕ್ಸಸ್: ತಮಿಳುನಾಡಿನಲ್ಲಿ ಒಟ್ಟಿಗೆ ಚುನಾವಣಾ ಕಣಕ್ಕೆ