ನವದೆಹಲಿ: ಭಾರತದ ಆರ್ಥಿಕತೆ ಬಗ್ಗೆ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಮಾಡಿರುವ ಆರೋಪಗಳಿಗೆ ಹಣಕಾಸು ಖಾತೆ ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಖಾತೆ ಸಚಿವ ಅನುರಾಗ್ ಠಾಕೂರ್ ಅಂಕಿ - ಅಂಶಗಳ ಸಹಿತ ತಿರುಗೇಟು ನೀಡಿದ್ದಾರೆ.
2021-22ರ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕ ಪ್ರಗತಿ ಶೇ. 12.5 ರಷ್ಟಕ್ಕೆ ಜಿಗಿಯಲಿದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆಗಳು ಅಂದಾಜಿಸಿವೆ ಎಂದು ಅನುರಾಗ್ ಠಾಕೂರ್ ತಿಳಿಸಿದ್ದಾರೆ. ದೇಶದ ಜಿಎಸ್ಟಿ ಸಂಗ್ರಹ ಈವರೆಗಿನ ಅತಿ ಹೆಚ್ಚು ಪ್ರಮಾಣದ 1.44 ಲಕ್ಷ ಕೋಟಿ ರೂ. ಒಂದೇ ತಿಂಗಳಲ್ಲಿ ಸಂಗ್ರಹ ಆಗಿದೆ. ಪ್ರಯಾಣಿಕರ ವಾಹನಗಳ ಮಾರಾಟ, ದ್ವಿಚಕ್ರ ವಾಹನ ಮಾರಾಟ, ತೈಲ ಬಳಕೆ, ಉಕ್ಕಿನ ಉತ್ಪಾದನೆ, ಸಿಮೆಂಟ್ ಉತ್ಪಾದನೆ, ಅಂತಾರಾಷ್ಟ್ರೀಯ ವಾಯು ಸರಕು ಸಾಗಣೆ ಮತ್ತಿತರ ಕ್ಷೇತ್ರಗಳು ಭಾರತದಲ್ಲಿ ಪ್ರಗತಿ ದಾಖಲಿಸಿವೆ. 2.65 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಸಾಲವನ್ನು ಎನ್ಬಿಎಫ್ಸಿ, ಖಾಸಗಿ ಮತ್ತು ಸರ್ಕಾರಿ ಬ್ಯಾಂಕ್ಗಳು ಮೂಲಕ ಮಂಜೂರು ಮಾಡಲಾಗಿದೆ. 92 ಲಕ್ಷಕ್ಕೂ ಹೆಚ್ಚು ಖಾತೆಗೆ ನೀಡಲಾಗಿದೆ. ಇವೆಲ್ಲವೂ ಉದ್ಯಮಗಳಿಗೆ ಹಣಕಾಸಿನ ಹರಿವು ನೀಡುವುದಿಲ್ಲವೇ ಎಂದು ಠಾಕೂರ್ ಪ್ರಶ್ನೆ ಮಾಡಿದ್ದಾರೆ.
ನಿಮಗಿಂತ ನಾವೇ ಬೆಸ್ಟ್ ಅಂಕಿ - ಅಂಶ ಸಮೇತ ನಿರೂಪಣೆ
2014- 19ರ ಎನ್‌ಡಿಎ ಅವಧಿಯಲ್ಲಿ ಗೋಧಿ ಖರೀದಿಗೆ 8 ಲಕ್ಷ ಕೋಟಿ ರೂ. ವಿತರಿಸಲಾಗಿದೆ. ಅದೇ ಯುಪಿಎ ಅವಧಿಯಲ್ಲಿ 2009ರಿಂದ 2014ರಲ್ಲಿ 3.74 ಲಕ್ಷ ಕೋಟಿ ವಿತರಿಸಲಾಗಿತ್ತು. 2009- 14ರ ಯುಪಿಎ ಅವಧಿಯಲ್ಲಿ ಖರೀದಿಸಿದ್ದಕ್ಕಿಂತ 74 ಪಟ್ಟು ಹೆಚ್ಚು ದ್ವಿದಳ ಧಾನ್ಯಗಳನ್ನು ಮೋದಿ ಸರ್ಕಾರವು ಕೊಂಡಿದೆ. ಕಳೆದ 5 ವರ್ಷದಲ್ಲಿ ಮೋದಿ ಸರ್ಕಾರವು 306.9 ಮಿಲಿಯನ್ ಟನ್ ಭತ್ತ ಮತ್ತು 162.7 ಮಿಲಿಯನ್ ಟನ್ ಗೋಧಿಯನ್ನು ಖರೀದಿಸಿದೆ. ಯುಪಿಎ ಅವಧಿಯಲ್ಲಿ 176.8 ಮಿಲಿಯನ್ ಟನ್ ಭತ್ತ ಹಾಗೂ 139.5 ಮಿಲಿಯನ್ ಟನ್ ಗೋಧಿ ಖರೀದಿಸಲಾಗಿತ್ತು ಎಂದು ಲೆಕ್ಕವನ್ನು ಮುಂದಿಡಲಾಗಿದೆ.
2020- 21ನೇ ಸಾಲಿನಲ್ಲಿ ಭತ್ತದ ಖರೀದಿಯು ದಾಖಲೆಯ 789 LMT ಆಗಿತ್ತು. ಪಿಎಂಕಿಸಾನ್ ಯೋಜನೆಯಡಿ ಎಂಟನೇ ಕಂತಿನಲ್ಲಿ 19,000 ಕೋಟಿ ರೂಪಾಯಿ ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗಿದೆ. ಇವೆಲ್ಲವುಗಳಿಂದ ರೈತರ ಕೈಯಲ್ಲಿ ನಗದು ಉಳಿದಂತೆ ಆಗುವುದಿಲ್ಲವೆ ಎಂದು ಠಾಕೂರ್ ಪ್ರಶ್ನಿಸಿದ್ದಾರೆ.
ಯುಪಿಎ ಅವಧಿಯಲ್ಲಿ ಬಡವರಿಗಾಗಿ ಎಷ್ಟು ಖಾತೆ ತೆರೆಯಲಾಯಿತು? ಮೋದಿ ಸರ್ಕಾರವು 42 ಕೋಟಿ ಜನ್ ಧನ್ ಖಾತೆ ತೆರೆಯುವ ಮೂಲಕ ಸೋರಿಕೆಯನ್ನು ತಡೆದು, ಪ್ರತಿ ರೂಪಾಯಿಯು ಫಲಾನುಭವಿಗಳಿಗೆ ಶೀಘ್ರವಾಗಿ ಸೇರುವಂತೆ ಮಾಡಿತು. ಅದೂ ಕೋವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲೂ ನೇರ ಬ್ಯಾಂಕ್ ವರ್ಗಾವಣೆ ಮಾಡಲಾಗಿದೆ. ಇದರಿಂದ ಹತ್ತಾರು ಲಕ್ಷ ಜನರು ಆರ್ಥಿಕವಾಗಿ ಸಬಲರಾಗಿದ್ದಾರೆ ಎಂದು ಠಾಕೂರ್ ತಿಳಿಸಿದ್ದಾರೆ.
ಕಳೆದ ವರ್ಷ ಕೋವಿಡ್ -19 ಅವಧಿಯಲ್ಲಿ ಎನ್‌ಡಿಎ ಸರ್ಕಾರ MGNREGA ಹಂಚಿಕೆಯನ್ನು 61,500 ಕೋಟಿ ರೂ.ಗಳಿಂದ ಐತಿಹಾಸಿಕ ಗರಿಷ್ಠ 1 ಲಕ್ಷ ಕೋಟಿಗೆ ಹೆಚ್ಚಿಸಿದೆ ಎಂದು ಸಚಿವ ಅನುರಾಗ್ ಠಾಕೂರ್ ಹೇಳಿದರು. "ನಾವು ದಿನಗೂಲಿಯನ್ನು 202 ರೂಗಳಿಗೆ ಹೆಚ್ಚಿಸಿದ್ದೇವೆ" ಎಂದು ಇದೇ ವೇಳೆ ಸ್ಪಷ್ಟನೆ ಕೊಟ್ಟರು
ಕೆಟ್ಟ ಸಾಲ ವಿತರಿಸಿದ ಹಿರಿಮೆ ಚಿದಂಬರಂಗೆ ಸಲ್ಲುತ್ತದೆ: ತಿರುಗೇಟು
ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದಾಗ ಯುಪಿಎ ಸರ್ಕಾರ "ಕೆಟ್ಟ ಸಾಲಗಳನ್ನು ವಿತರಿಸಿದೆ" ಎಂದು ಅನುರಾಗ್ ಆರೋಪಿಸಿದರು. "ಉದ್ಯಮವನ್ನು ಉಳಿಸಿಕೊಳ್ಳಲು ಮತ್ತು ಪುನರುಜ್ಜೀವನಗೊಳಿಸಲು ನಾವು ಇಸಿಎಲ್‌ಜಿಎಸ್ ಯೋಜನೆಯ ಮೂಲಕ 3 ಲಕ್ಷ ಕೋಟಿ ರೂ.ಗಳ ಗ್ಯಾರಂಟಿ ನೀಡಿದ್ದೇವೆ. ಎಂಎಸ್‌ಎಂಇಗಳು, ಆತಿಥ್ಯ, ಪ್ರಯಾಣ ಮತ್ತು ಪ್ರವಾಸೋದ್ಯಮ, ವಿರಾಮ, ಕ್ರೀಡಾ ಕ್ಷೇತ್ರಗಳು, ಆರೋಗ್ಯ ರಕ್ಷಣೆ ಇತ್ಯಾದಿಗಳನ್ನು ಒಳಗೊಂಡಿದೆ. ಮೋದಿ ಸರ್ಕಾರ ಭಾಗವಹಿಸುವಿಕೆಯನ್ನು ಅಳವಡಿಸಿಕೊಂಡಿದೆ ಮತ್ತು ನಮ್ಮ ಪ್ರತಿಕ್ರಿಯೆ ವಿಧಾನವು ಅದರ ಹಿಂದಿನ ಯುಪಿಎ ಸರ್ಕಾರಕ್ಕಿಂತ ಭಿನ್ನವಾಗಿದೆ. ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳು, ಎನ್‌ಬಿಎಫ್‌ಸಿಗಳು 92 ಲಕ್ಷಕ್ಕೂ ಹೆಚ್ಚು ಖಾತೆಗಳಿಗೆ 2.65 ಲಕ್ಷ ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಇದು ವ್ಯವಹಾರಗಳಿಗೆ 'ನಗದು' ಹರಿವನ್ನು ಒದಗಿಸುವುದಿಲ್ಲವೇ? ಎಂದು ಚಿದಂಬರಂಗೆ ಪ್ರಶ್ನಿಸಿದರು.