ಚೆನ್ನೈ(ತಮಿಳುನಾಡು): ಹಿಂದೂ ಧಾರ್ಮಿಕ ಸಂಸ್ಥೆಯಾದ ಚಿನ್ಮಯ ಮಿಷನ್ ದೇಶಾದ್ಯಂತ ಹಲವು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು, ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ಉತ್ಪಾದಿಸಿ ಪೂರೈಸುವ ಕಾರ್ಯ ಮಾಡುತ್ತಿದೆ. ಆದ್ರೆ, 6 ನೇ ತರಗತಿಯ ಇತಿಹಾಸ ಪುಸ್ತಕದಲ್ಲಿ ಮಕ್ಕಳ ಮನಸ್ಸಿನಲ್ಲಿ ವರ್ಣಭೇದ ನೀತಿ ಹುಟ್ಟುಹಾಕುವಂತಹ ಪ್ರಶ್ನೆಗಳನ್ನು ಕೇಳಲಾಗಿದೆ ಎಂಬ ಆರೋಪವಿದೆ.

ಚೆನ್ನೈನ ಕ್ರೋಮ್‌ಪೇಟ್‌ನಲ್ಲಿರುವ ವಿವೇಕಾನಂದ ವಿದ್ಯಾಲಯ ಶಾಲೆಯಲ್ಲಿ ಚಿನ್ಮಯ ಮಿಷನ್ ತಯಾರಿಸಿದ ಪುಸ್ತಕಗಳನ್ನು ಬಳಸಲಾಗುತ್ತಿದೆ. 6ನೇ ತರಗತಿ ಇತಿಹಾಸ ಪುಸ್ತಕ 'ರೇಡಿಯಂಟ್ ಭಾರತ್'ದಲ್ಲಿ ವೃತ್ತಿಯ ಆಧಾರದ ಮೇಲೆ ಜನರನ್ನು ಬ್ರಾಹ್ಮಣ, ಕ್ಷತ್ರಿಯ ವೈಶ್ಯ, ಶೂದ್ರ ಎಂದು 4 ವರ್ಗಗಳಾಗಿ ವಿಂಗಡಿಸಲಾಗಿದೆ ಎಂದು ಹೇಳಲಾಗಿದೆ. ಜೊತೆಗೆ ಅಂಬೇಡ್ಕರ್, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಮುಂತಾದವರು ಯಾವ ಜಾತಿಗೆ ಸೇರಿದವರು ಎಂಬ ಪ್ರಶ್ನೆಯನ್ನು ಕೇಳಲಾಗಿದೆ.

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳಿಗೆ ಸಮಾನತೆಯ ಪಾಠವನ್ನು ಕಲಿಸುವ ಬದಲು ಜಾತಿ ಮತ್ತು ವರ್ಣಭೇದ ನೀತಿಗೆ ಸಂಬಂಧಿಸಿದ ಅಂಶಗಳ ಆಧಾರದಲ್ಲಿ ಪ್ರಶ್ನೆಗಳನ್ನು ಕೇಳಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುತ್ತಿದೆ.

ಈ ಹಿಂದೆ ಕರ್ನಾಟಕದಲ್ಲಿ ಶಾಲಾ ಪಠ್ಯಗಳಲ್ಲಿ ಹಲವು ಸಾಹಿತಿಗಳ ಪಾಠಗಳನ್ನು ಕೈಬಿಟ್ಟಿದ್ದಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ, ಸರಣಿ ತಪ್ಪುಗಳನ್ನು ಪಠ್ಯ ಪುಸ್ತಕ ರಚನಾ ಸಮಿತಿ ಎಸಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು.