ನವದೆಹಲಿ : ಸಿಸ್ಟಂ ಆಫ್ ಏರ್ ಕ್ವಾಲಿಟಿ ಅಂಡ್ ವೆದರ್ ಫೋರ್ಕಾಸ್ಟಿಂಗ್ ರಿಸರ್ಚ್ (SAFAR) ನೀಡಿದ ಮಾಹಿತಿ ಪ್ರಕಾರ, ದೆಹಲಿಯಲ್ಲಿನ ಒಟ್ಟಾರೆ ಗಾಳಿಯ ಗುಣಮಟ್ಟವು ಕಳೆದ ಮೂರು ದಿನಗಳಿಂದ ಅತ್ಯಂತ ಕಳಪೆಯಾಗಿದ್ದು, ಇಂದು ಬೆಳಗ್ಗೆ ಸಹ 'ತೀವ್ರ' ವಿಭಾಗದಲ್ಲಿಯೇ ಮುಂದುವರಿದಿದೆ. ಪ್ರಸ್ತುತ್ತ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 504 ದಾಖಲಾಗಿದೆ ಎಂದು ತಿಳಿಸಿದೆ.
ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (T3) ವಾಯು ಗುಣಮಟ್ಟ ಸೂಚ್ಯಂಕವು 571 ದಾಖಲಾಗಿದ್ದರೆ, ಧೀರ್‌ಪುರದಲ್ಲಿ 542 ವರದಿಯಾಗಿದೆ. ಗುರುಗ್ರಾಮ್ನಲ್ಲಿ 512 ಎಕ್ಯೂಐ ದಾಖಲಾಗಿದ್ದು, ಗಾಳಿಯ ಗುಣಮಟ್ಟ ಅತ್ಯಂತ ಅಪಾಯಕಾರಿಯಾಗಿದೆ. ಇನ್ನೊಂದೆಡೆ, ನಗರದಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ನಿವಾಸಿಗಳಲ್ಲಿ ಆತಂಕ ಉಂಟಾಗಿದ್ದು, ಉಸಿರಾಡಲು ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಥಳೀಯರಾದ ಕ್ರಿಶನ್ ಕಾಂತ್, "ಕಳೆದ 3-4 ದಿನಗಳಿಂದ ಮಾಲಿನ್ಯವು ತುಂಬಾ ಹೆಚ್ಚಾಗಿದೆ. ದೆಹಲಿ ಸರ್ಕಾರ ಕೂಡಲೇ ಈ ಬಗ್ಗೆ ಉಪಕ್ರಮವನ್ನು ತೆಗೆದುಕೊಳ್ಳಬೇಕು, ಸದ್ಯಕ್ಕೆ ನಾವು ಮಾಸ್ಕ್ ಧರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಉಸಿರಾಡಲು ಕಷ್ಟವಾಗುತ್ತಿದೆ" ಎಂದು ಹೇಳಿದರು.
ಐಎಂಡಿ ನೀಡಿದ ಮಾಹಿತಿ ಪ್ರಕಾರ, ಶನಿವಾರ ರಾಜಧಾನಿಯಲ್ಲಿ ಗರಿಷ್ಠ ತಾಪಮಾನ 30.02 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 16.8 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಯಿದೆ. ಇದು ಸಾಮಾನ್ಯಕ್ಕಿಂತ ಕಡಿಮೆಯಾಗಿದೆ. ಆಕಾಶದಲ್ಲಿ ಮಂಜು ಕವಿದ ವಾತಾವರಣ ಇರಲಿದ್ದು, ಮಳೆಯಾಗುವ ಸಾಧ್ಯತೆ ಇಲ್ಲ ಎಂದು ತಿಳಿಸಿದೆ.
ಇದನ್ನೂ ಓದಿ : ದೆಹಲಿ ಗಾಳಿ ಗುಣಮಟ್ಟ ಮತ್ತಷ್ಟು ಕಲುಷಿತ : ಸರ್ಕಾರ ಕರೆದ ಸಭೆಗೆ ಅಧಿಕಾರಿಗಳೇ ಗೈರು !
ದೆಹಲಿಯ ಲುಟ್ಯೆನ್ಸ್ ವಲಯ ಪ್ರದೇಶದಲ್ಲಿ AQI 500 ರ ಗಡಿ ದಾಟಿದೆ. ಅಂದರೆ ದೆಹಲಿಯ ಗಾಳಿ ಸಂಪೂರ್ಣ ವಿಷಮಯವಾಗಿದೆ ಎಂದು ಹೇಳಬಹುದು. ಮನೆಯಿಂದ ಹೊರಗೆ ಹೋಗುವುದಿರಲಿ ಮನೆಯಲ್ಲಿದ್ದರೂ ಕಣ್ಣು ಉರಿ, ಗಂಟಲು ನೋವು, ವಾಕರಿಕೆ, ಉಸಿರಾಟದ ತೊಂದರೆ, ಹೆದರಿಕೆಯ ಲಕ್ಷಣಗಳು ವೃದ್ಧರು, ಮಕ್ಕಳು ಮತ್ತು ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳಲಾರಂಭಿಸಿವೆ. ರಾಷ್ಟ್ರೀಯ ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ, ದೆಹಲಿಯಲ್ಲಿ ಮಾಲಿನ್ಯದ ಮಟ್ಟವು ತುಂಬಾ ಕೆಟ್ಟದರಿಂದ ಅತ್ಯಂತ ಅಪಾಯಕಾರಿ ಮಟ್ಟಕ್ಕೆ ತಲುಪಿದೆ.
ಇದನ್ನೂ ಓದಿ : ನವದೆಹಲಿ ಬಳಿಕ ಮುಂಬೈನಲ್ಲಿ ಹೆಚ್ಚುತ್ತಿದೆ ವಾಯುಮಾಲಿನ್ಯ ; ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಬಿಎಂಸಿ
ಇನ್ನು 0-50 ವರೆಗಿನ AQI (ವಾಯು ಗುಣಮಟ್ಟ ಸೂಚ್ಯಂಕ) ಒಳ್ಳೆಯದು, 51-100 ತೃಪ್ತಿಕರ, 101-200 ಸರಾಸರಿ, 201-300 ಕೆಟ್ಟದ್ದು, 301-400 ತುಂಬಾ ಕೆಟ್ಟದ್ದು, 401-500 ನಿರ್ಣಾಯಕ, ಅಂದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ನಿರ್ಣಾಯಕ ಮಟ್ಟದ AQI ಜನರ ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಎಂದು ಪರಿಗಣಿಸಲಾಗಿದೆ.
ಇದನ್ನೂ ಓದಿ : ದೆಹಲಿಯಲ್ಲಿ ವಿಪರೀತ ವಾಯುಮಾಲಿನ್ಯ ; ಇಂದು, ನಾಳೆ ಶಾಲೆಗಳಿಗೆ ರಜೆ