ಮೆಡ್ಚಲ್ (ತೆಲಂಗಾಣ): ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯಸಿ.. ಅಂದ್ರೆ ಹೆತ್ತ ತಾಯಿ ಮತ್ತು ಹೊತ್ತ ಭೂಮಿ ಸ್ವರ್ಗಕ್ಕಿಂತಲು ಮಿಗಿಲು ಎಂಬ ಮಾತಿದೆ. ತಾಯಿ-ಮಕ್ಕಳ ಸಂಬಂಧವು ವಿಶ್ವದಲ್ಲೇ ಅತ್ಯಂತ ಪವಿತ್ರವಾದುದು. ಈ ಮಾತನ್ನು ನಾವ್ ಈಗ ಯಾಕ್ ಹೇಳ್ತಾ ಇದೇವಿ ಅನ್ನೋದಾದರೆ ತನ್ನ ಮಕ್ಕಳಿಗಾಗಿ ತಾಯಿ ಏನು ಬೇಕಾದರೂ ಮಾಡುತ್ತಾಳೆ. ಆದರೆ ಅಮ್ಮನ ಮೇಲೆ ಮಕ್ಕಳ ಪ್ರೀತಿಯೂ ಬೇಷರತ್ತಾದದ್ದು ಎಂದು ತೆಲಂಗಾಣದ ವ್ಯಕ್ತಿಯೊಬ್ಬರು ಸಾಬೀತುಪಡಿಸಿದ್ದಾರೆ.
ಹೌದು, ತೆಲಂಗಾಣದ ಮೆಡ್ಚಲ್ ಜಿಲ್ಲೆಯ ಸಿಂಹಪುರಿ ಕಾಲೋನಿಯಲ್ಲಿ ವಾಸವಾಗಿರುವ ರಾಮ್‌ಕುಮಾರ್ ಎಂಬವರ ತಾಯಿ ವಿಜಯಲಕ್ಷ್ಮಿ(59) ಕಳೆದ ವರ್ಷ ಮೇ 26 ರಂದು ಕೊರೊನಾದಿಂದ ಮೃತಪಟ್ಟಿದ್ದರು. ತಾಯಿಯ ಹಠಾತ್ ನಿಧನವನ್ನು ಅರಗಿಸಿಕೊಳ್ಳಲಾಗದ ಪುತ್ರ ಆಕೆಯನ್ನು ಪ್ರತಿದಿನ ನೋಡಬೇಕೆಂದು ಬಯಸಿದರು. ಅಮ್ಮನ ಚಿತ್ರವನ್ನು ಬಿಡಿಸಿ ಅದನ್ನು ದೇವರಂತೆ ಪೂಜಿಸಿದರು. ಇದೂ ಕೂಡ ರಾಮ್ಕುಮಾರ್ಗೆ ತೃಪ್ತಿ ನೀಡಲಿಲ್ಲ.
ಇದೀಗ ಮನೆಯಲ್ಲೇ ತಾಯಿಯ ಪ್ರತಿಮೆ ಸ್ಥಾಪಿಸಿದ್ದಾರೆ. ಈ ಪ್ರತಿಮೆ ತಯಾರಿಸಲು ರಾಜಸ್ಥಾನದ ಕಲಾವಿದನಿಗೆ ಹೇಳಿದ್ದ ರಾಮ್ಕುಮಾರ್ಗೆ ಎರಡು ದಿನಗಳ ಹಿಂದೆಯಷ್ಟೇ ತಾಯಿಯ ಪ್ರತಿಮೆ ಕೈಸೇರಿದೆ. ಅಮೃತಶಿಲೆಯಿಂದ ಮಾಡಿರುವ ಮೂರೂವರೆ ಅಡಿ ಎತ್ತರದ ಈ ಪ್ರತಿಮೆಗಾಗಿ ಇವರು ಸುಮಾರು ಒಂದು ಲಕ್ಷ ರೂ. ಖರ್ಚು ಮಾಡಿದ್ದಾರೆ.
ಇದನ್ನೂ ಓದಿ: ಆನೆಯ ಎದೆ ಹಾಲು ಸವಿಯಲು ಹರಸಾಹಸ ಪಟ್ಟ 3 ವರ್ಷದ ಮಗು!
ಈ ಕುರಿತು 'ಈಟಿವಿ ಭಾರತ'ದೊಂದಿಗೆ ಮಾತನಾಡಿರುವ ರಾಮ್‌ಕುಮಾರ್, "ಕಳೆದ ವರ್ಷ ನನ್ನ ತಾಯಿ ಕೋವಿಡ್ನಿಂದ ನಿಧನರಾಗಿದ್ದರು. ನನಗೆ ಅವರನ್ನು ಮರೆಯಲು ಸಾಧ್ಯವಾಗಲಿಲ್ಲ ಮತ್ತು ಅಮ್ಮನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೀನಿ. ಅವಳ ನೆನಪನ್ನು ಹಿಡಿದಿಡಬೇಕು. ಕೇವಲ ಫೋಟೋವನ್ನು ಗೋಡೆಗೆ ನೇತುಹಾಕುವ ಬದಲು ಅವಳನ್ನು ದೇವರಂತೆ ಪೂಜಿಸಲು ಬಯಸುವೆ" ಎಂದರು.
"ಈ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಮನಸ್ಸಲ್ಲಿ ಆಲೋಚನೆ ಬಂದ ಕೂಡಲೇ ಕಂಚಿನ ವಿಗ್ರಹ ಮಾಡಿಸೋದಾ, ಸಿಮೆಂಟ್ ವಿಗ್ರಹ ಮಾಡಿಸೋದಾ ಅನ್ನೋ ಗೊಂದಲದಲ್ಲಿದ್ದೆ. ಆದರೆ ಅಮೃತಶಿಲೆಯಲ್ಲಿ ಮಾಡಿಸಿದರೆ ನಮ್ಮೊಂದಿಗೆ ಅಮ್ಮ ಶಾಶ್ವತವಾಗಿ ಇರುತ್ತಾಳೆ ಎನ್ನುವ ಭಾವನೆ ಮೂಡುತ್ತೆ. ಹೀಗಾಗಿ ರಾಜಸ್ಥಾನಕ್ಕೆ ತೆರಳಿ ಅಮೃತಶಿಲೆಯಲ್ಲಿ ಪ್ರತಿಮೆ ಮಾಡಿಸಿದೆ. ಈಗ ತುಂಬಾ ಸಂತೋಷವಾಗುತ್ತಿದೆ" ಎಂದು ರಾಮ್‌ಕುಮಾರ್ ಹೇಳಿದ್ದಾರೆ.