ರಾಯ್‌ಪುರ (ಛತ್ತೀಸ್‌ಗಢ): ಛತ್ತೀಸ್‌ಗಢ ವಿಧಾನಸಭೆಯ ಮೊದಲ ಹಂತದ ಚುನಾವಣೆಯಲ್ಲಿ 223 ಅಭ್ಯರ್ಥಿಗಳ ಪೈಕಿ 46 ಕೋಟ್ಯಧಿಪತಿಗಳು ಕಣದಲ್ಲಿದ್ದಾರೆ. ವಿಶೇಷ ಅಂದರೆ, ಬಡ ಪಕ್ಷ ಎಂದು ಗುರುತಿಸಿಕೊಂಡಿರುವ ಆಮ್ ಆದ್ಮಿಯ ಅಭ್ಯರ್ಥಿಯೊಬ್ಬರು ರಾಜ್ಯದಲ್ಲಿಯೇ ಅತಿ ಸಿರಿವಂತ ಅಭ್ಯರ್ಥಿಯಾಗಿದ್ದಾರೆ. ಇನ್ನಿಬ್ಬರು ಅಭ್ಯರ್ಥಿಗಳು ತಮ್ಮ ಬಳಿ ಆಸ್ತಿಯೇ ಇಲ್ಲ ಎಂದು ಘೋಷಿಸಿದ್ದಾರೆ.
ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ಛತ್ತೀಸ್‌ಗಢ ಎಲೆಕ್ಷನ್ ವಾಚ್ ಅಭ್ಯರ್ಥಿಗಳು ಸಲ್ಲಿಸಿದ ಅಫಿಡವಿಟ್ಗಳ ಆಧಾರದ ಮೇಲೆ ಸಮೀಕ್ಷೆ ನಡೆಸಿದ್ದು, ಮೊದಲ ಹಂತದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಪ್ರತಿ ಅಭ್ಯರ್ಥಿಯ ಸರಾಸರಿ ಆಸ್ತಿ 1.34 ಕೋಟಿ ರೂಪಾಯಿ ಇದೆ ಎಂದು ಹೇಳಿದೆ.
ಅತಿ ಶ್ರೀಮಂತ ಅಭ್ಯರ್ಥಿಗಳು: ಒಟ್ಟು 90 ವಿಧಾನಸಭಾ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ನವೆಂಬರ್ 7 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದ್ದು, ಉಳಿದ 70 ಕ್ಷೇತ್ರಗಳಿಗೆ ನವೆಂಬರ್ 17 ರಂದು ಮತದಾನ ನಡೆಯಲಿದೆ. ಈ ಪೈಕಿ ಅತಿ ಹೆಚ್ಚು ಘೋಷಿತ ಆಸ್ತಿ ಹೊಂದಿರುವ ಮೊದಲ ಮೂವರು ಅಭ್ಯರ್ಥಿಗಳೆಂದರೆ ಕವರ್ಧಾ ಕ್ಷೇತ್ರದಿಂದ ಸ್ಪರ್ಧಿಸಿರುವ, ರಾಜವಂಶಸ್ಥರಾದ ಎಎಪಿಯ ಖಡ್ಗರಾಜ್ ಸಿಂಗ್ ಅವರು ಬರೋಬ್ಬರಿ 40 ಕೋಟಿ ರೂ.ಗೂ ಅಧಿಕ ಆಸ್ತಿಯನ್ನು ಹೊಂದಿದ್ದಾರೆ. ನಂತರದಲ್ಲಿ ಬಿಜೆಪಿಯ ಭಾವನಾ ಬೋಹ್ರಾ (ಪಾಂಡರಿಯಾ ಕ್ಷೇತ್ರ) 33 ಕೋಟಿಗೂ ಹೆಚ್ಚು, ಕಾಂಗ್ರೆಸ್‌ನ ಜತೀನ್ ಜೈಸ್ವಾಲ್ (ಜಗದಲ್‌ಪುರ) 16 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ.
ಕಡಿಮೆ ಆಸ್ತಿ ಹುರಿಯಾಳುಗಳು: ಕಡಿಮೆ ಆಸ್ತಿ ಹೊಂದಿರುವ ಮೂವರು ಅಭ್ಯರ್ಥಿಗಳೆಂದರೆ ಡೊಂಗರ್‌ಗಢ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾದ ಹೇಮ್ ಕುಮಾರ್ ಸತ್ನಾಮಿ ಕೇವಲ 8 ಸಾವಿರ ರೂಪಾಯಿ ಘೋಷಿಸಿದ್ದರೆ, ಅಂತಗಢ ಕ್ಷೇತ್ರದ ಸ್ಪರ್ಧಿ ಯಾದ ಭಾರತೀಯ ಶಕ್ತಿ ಚೇತನ ಪಕ್ಷದ ನರಹರ್ ದಿಯೋ ಗಾವ್ಡೆ ಅವರು 10 ಸಾವಿರ, ರಿಪಬ್ಲಿಕನ್ ಪಕ್ಷದ (ಖೋರ್ಪಿಯಾ) ರಾಜನಂದಗಾಂವ್‌ನ ಅಭ್ಯರ್ಥಿ ಪ್ರತಿಮಾ ಅವರು ಕೂಡ 10 ಸಾವಿರ ರೂಪಾಯಿ ಇದೆ ಎಂದು ಅಫಿಡವಿಟ್ನಲ್ಲಿ ನಮೂದಿಸಿದ್ದಾರೆ.
ಜೊತೆಗೆ ಕಂಕೇರ್ ಕ್ಷೇತ್ರದಿಂದ ಆಜಾದ್ ಜನತಾ ಪಕ್ಷದ ಅಭ್ಯರ್ಥಿ ಪಾರ್ವತಿ ಟೇಟಾ ಮತ್ತು ಮೊಹ್ಲಾ-ಮಾನ್‌ಪುರನಿಂದ ಜೆಸಿಸಿ (ಜೆ) ಹುರಿಯಾಳು ನಾಗೇಶ್ ಪುರಂ ಅವರು ತಮ್ಮಲ್ಲಿ ಆಸ್ತಿಯೇ ಇಲ್ಲ ಎಂದು ಘೋಷಿಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಪಕ್ಷವಾರು ಪೈಕಿ, ಬಿಜೆಪಿ 20 ಕೋಟ್ಯಧಿಪತಿಗಳ ಸರಾಸರಿ ಆಸ್ತಿಯು 5.33 ಕೋಟಿ ರೂ. ಇದ್ದರೆ, 20 ಕಾಂಗ್ರೆಸ್ ಕೋಟ್ಯಧಿಪತಿ ಅಭ್ಯರ್ಥಿಗಳು 5.27 ಕೋಟಿ ರೂ. ಮೌಲ್ಯದ ಸರಾಸರಿ ಆಸ್ತಿ ಹೊಂದಿದ್ದಾರೆ. 10 ಆಪ್ ಅಭ್ಯರ್ಥಿಗಳು 4.45 ಕೋಟಿ ಮತ್ತು 15 ಜನತಾ ಕಾಂಗ್ರೆಸ್ ಛತ್ತೀಸ್‌ಗಢ (ಜೆ) ಅಭ್ಯರ್ಥಿಗಳು 30.54 ಲಕ್ಷ ರೂಪಾಯಿ ಸರಾಸರಿ ಆಸ್ತಿಯನ್ನು ಹೊಂದಿದ್ದಾರೆ.
ಕಾಂಗ್ರೆಸ್‌ನ ಮೊಹಮ್ಮದ್ ಅಕ್ಬರ್ (ಕ್ವಾರ್ಧಾ ಕ್ಷೇತ್ರ), ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಅಭ್ಯರ್ಥಿ ರಮಣ್ ಸಿಂಗ್ (ರಾಜನಂದಗಾಂವ್), ವಿಕ್ರಾಂತ್ ಸಿಂಗ್ (ಖೈರಗಢ) ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ (ಐಟಿಆರ್) ಹೆಚ್ಚಿನ ಆದಾಯವನ್ನು ಘೋಷಿಸಿದ ಮೊದಲ ಮೂವರು ಅಭ್ಯರ್ಥಿಗಳು ಎಂದು ಅದು ಹೇಳಿದೆ.
ಕಾಂಗ್ರೆಸ್‌ನ ಅಕ್ಬರ್ ಅವರು ಐಟಿಆರ್‌ನಲ್ಲಿ (ಸ್ವತಃ, ಸಂಗಾತಿ ಮತ್ತು ಅವಲಂಬಿತರು ಸೇರಿದಂತೆ) ಒಟ್ಟು 1 ಕೋಟಿ ರೂ.ಗಿಂತ ಹೆಚ್ಚು ಆದಾಯವನ್ನು ತೋರಿಸಿದ್ದಾರೆ. ನಂತರದಲ್ಲಿ ವಿಕ್ರಾಂತ್ ಸಿಂಗ್ ಅವರು 63 ಲಕ್ಷಕ್ಕೂ ಅಧಿಕ, ರಮಣ್ ಸಿಂಗ್ ಅವರು 55 ಲಕ್ಷ ರೂಪಾಯಿ ಬರುತ್ತದೆ ಎಂದು ಘೋಷಿಸಿದ್ದಾಗಿ ನಮೂದಿಸಲಾಗಿದೆ.
ಶೈಕ್ಷಣಿಕ ಅರ್ಹತೆ: 223 ಅಭ್ಯರ್ಥಿಗಳ ಪೈಕಿ 115 (ಶೇ. 52) ಮಂದಿ ತಮ್ಮ ಶೈಕ್ಷಣಿಕ ಅರ್ಹತೆಯನ್ನು 5 ರಿಂದ 12ನೇ ತರಗತಿ ಎಂದು ಘೋಷಿಸಿದ್ದರೆ, 97 (ಶೇ. 43) ಅಭ್ಯರ್ಥಿಗಳು ಪದವೀಧರರು ಅಥವಾ ಅದಕ್ಕಿಂತ ಮೇಲ್ಪಟ್ಟವರು ಎಂದು ಘೋಷಿಸಿದ್ದಾರೆ. ಐವರು ಡಿಪ್ಲೊಮಾ ಮತ್ತು ನಾಲ್ವರು ಕೇವಲ ಸಾಕ್ಷರರು ಎಂದು ಘೋಷಿಸಿಕೊಂಡಿದ್ದಾರೆ. ಒಬ್ಬ ಅಭ್ಯರ್ಥಿ ಅನಕ್ಷರಸ್ಥ ಎಂದಿದ್ದರೆ, ಇನ್ನೊಬ್ಬರು ಅವರ ಶೈಕ್ಷಣಿಕ ಅರ್ಹತೆಯನ್ನು ನಮೂದಿಸಿಲ್ಲ ಎಂದು ಐಡಿಆರ್ ಹೇಳಿದೆ. ಕಾಂಗ್ರೆಸ್ ಮತ್ತು ಬಿಜೆಪಿಯಿಂದ ತಲಾ ಮೂವರು ಸೇರಿದಂತೆ 25 (ಶೇ 11) ಮಹಿಳಾ ಅಭ್ಯರ್ಥಿಗಳು ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: Death threat to Ambani: 20 ಕೋಟಿ ಕೊಡಲೇಬೇಕು.. ಮುಖೇಶ್ ಅಂಬಾನಿಗೆ ಮತ್ತೊಮ್ಮೆ ಬೆದರಿಕೆ