ಲಖನೌ: ಜಿಲ್ಲೆಯಲ್ಲಿ ಇಂದು ರಾಯ್ ಬರೇಲಿ ರಸ್ತೆ ಬಳಿ ಬೃಹತ್ ಮಂಟಪವನ್ನು ಹಾಕಿ ವೃಂದಾವನ ಯೋಜನೆಯಡಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಮಿಕ ಇಲಾಖೆ ಆಯೋಜಿಸಿರುವ ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 3,500 ಜೋಡಿಗಳು ವಿವಾಹವಾಗಲಿದ್ದಾರೆ.

ವೃಂದಾವನ ಯೋಜನೆಯಡಿ ಅನೇಕ ಸಮುದಾಯದ ಯುವತಿಯರು - ಯುವಕರು ಸೇರಿದಂತೆ 3500 ದಂಪತಿಗಳು ಸಾಂಸರಿಕ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆಯಲ್ಲಿ ಪಾಲ್ಗೊಂಡ ಅತಿಥಿ ಮತ್ತು ಆಯಾ ಕುಟುಂಬಸ್ಥರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಮನೋಹರ್ ಲಾಲ್ ಹೇಳಿದರು.
35 ಸಾವಿರ ಜನರ ವಿವಾಹ ಮಹೋತ್ಸವದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದರೊಂದಿಗೆ ಸ್ವಾಮಿ ಪ್ರಸಾದ್ ಮೌರ್ಯ, ಮುನ್ನಾಲ್ ಲಾಲ್ ಕೋರಿ, ಉತ್ತರ ಪ್ರದೇಶದ ಸರ್ಕಾರಿ ಅಧಿಕಾರಿಗಳು ಮತ್ತು ಇತರ ಜನರ ಪ್ರತಿನಿಧಿಗಳು ಉಪಸ್ಥಿತರಿರುತ್ತಾರೆ.

ವಿವಾಹದ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ರಾಜ್ಯದ ಕಾರ್ಮಿಕ ಮತ್ತು ಉದ್ಯೋಗ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಹೇಳಿದರು. ಕಾರ್ಮಿಕರು, ಬಡವರು, ಆರ್ಥಿಕವಾಗಿ ದುರ್ಬಲ ಜನರ ಯೋಗಕ್ಷೇಮಕ್ಕಾಗಿ ಮತ್ತು ಅವರು ಮುಂದೆ ಬರಲು ರಾಜ್ಯ ಸರ್ಕಾರವು ಅನೇಕ ಕಲ್ಯಾಣ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಕಾರ್ಮಿಕರು ಇನ್ನು ಮುಂದೆ ತಮ್ಮ ಹೆಣ್ಣುಮಕ್ಕಳ ಮದುವೆ ಅಥವಾ ಮಕ್ಕಳ ಶಿಕ್ಷಣದ ಬಗ್ಗೆ ಚಿಂತಿಸಬೇಕಾಗಿಲ್ಲ. ಈ ಸಾಮೂಹಿಕ ಸಮಾರಂಭದಲ್ಲಿ 3,500 ಜೋಡಿಗಳು ವಿವಾಹವಾಗಲಿದ್ದು, ಈ ಸಾಮೂಹಿಕ ಮದುವೆಗಳ ಮೂಲಕ ವಿಶ್ವದ ಕೀರ್ತಿ ಪಾತ್ರರಾಗಲಿದ್ದೇವೆ ಎಂದರು.
ಈ ಯೋಜನೆಯಡಿ ಕಾರ್ಮಿಕರ ಮಗಳ ಮದುವೆಗೆ 55,000 ಆರ್ಥಿಕ ನೆರವು ನೀಡಲಾಗುತ್ತದೆ. ಅಂತರ್ಜಾತಿ ವಿವಾಹಗಳಿಗೆ 65,000 ಆರ್ಥಿಕ ನೆರವು ಮತ್ತು ಸಾಮೂಹಿಕ ವಿವಾಹ ಸ್ಥಳದಲ್ಲಿ ಮದುವೆಯಾಗಲು 75,000 ಆರ್ಥಿಕ ನೆರವು ನೀಡಲಾಗುತ್ತದೆ. ಕಾರ್ಮಿಕರು ತಮ್ಮ ಇಬ್ಬರು ಹೆಣ್ಣುಮಕ್ಕಳವರೆಗೆ ಈ ಯೋಜನೆಯ ಲಾಭ ಪಡೆಯಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ
ವಧುವಿಗೆ 18 ವರ್ಷಗಳು ಮತ್ತು ವರನಿಗೆ 21 ವರ್ಷಕ್ಕಿಂತ ಹೆಚ್ಚಿರಬೇಕು. ಈ ಯೋಜನೆಯ ಲಾಭ ಪಡೆಯಲು ಕಾರ್ಮಿಕರ ನೋಂದಣಿ ಮಾಡಿ 100 ದಿನಗಳು ಪೂರೈಸಿರಬೇಕೆಂದು ಸಚಿವರು ಹೇಳಿದರು.
ಈ ವೈವಾಹಿಕ ಕಾರ್ಯಕ್ರಮದಲ್ಲಿ ಲಖನೌ, ಹಾರ್ಡೊಯ್, ಸೀತಾಪುರ , ರೇ ಬರೇಲಿ, ಉನ್ನಾವೊ, ಲಖಿಂಪುರ ಖೇರಿ ಮತ್ತು ಬರಾಬಂಕಿ ಜಿಲ್ಲೆಗಳು ಸೇರಿದಂತೆ ಒಟ್ಟು 3,500 ಜೋಡಿಗಳು ವಿವಾಹವಾಗುತ್ತಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಸಾಮೂಹಿಕ ವಿವಾಹ ಕಾರ್ಯಕ್ರಮದ ಸಿದ್ಧತೆಗಳನ್ನು ಡಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಪೊಲೀಸ್ ಆಯುಕ್ತ ಡಿ.ಕೆ.ತಾಕೂರ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಸಂಜೆಯೊಳಗೆ ಎಲ್ಲಾ ವ್ಯವಸ್ಥೆಗಳನ್ನು ಸರಿಪಡಿಸಲು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದರು.