ಸೂರತ್ (ಗುಜರಾತ್): ರೀಲ್ಸ್ ಮಾಡಲೆಂದು ರೈಲ್ವೆ ಹಳಿ ಮೇಲೆ ಬಂದು ನಿಂತಿದ್ದ ಯುವಕನಿಗೆ ರೈಲು ಗುದ್ದಿ ಸಾವನ್ನಪ್ಪಿರುವ ಘಟನೆ ಗುಜರಾತ್ನ ಸೂರತ್‌ನಲ್ಲಿ ನಡೆದಿದೆ. ಮೃತನನ್ನು ನೇಪಾಳ ಮೂಲದ ಪ್ರಕಾಶ್ ಮಂಗಲ್ ಸುನರ್ (19) ಎಂದು ಗುರುತಿಸಲಾಗಿದೆ. ತಮ್ಮ ದೇಶದಲ್ಲಿ ಒಮ್ಮೆಯೂ ರೈಲು ನೋಡದ ಪ್ರಕಾಶ್, ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡಲು ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆ ತನ್ನ ಅಣ್ಣ ಅನಿಲ್ ಸುನಾರ್ನೊಂದಿಗೆ ಉದ್ಯೋಗ ನಿಮಿತ್ತ ಸೂರತ್‌ಗೆ ಬಂದಿದ್ದಾನೆ. ನೇಪಾಳದಲ್ಲಿ ರೈಲು ಇಲ್ಲದ ಕಾರಣ ಮಂಗಳವಾರ ರಾತ್ರಿ ರೈಲ್ವೆ ನಿಲ್ದಾಣಕ್ಕೆ ಇಬ್ಬರೂ ತೆರಳಿದ್ದರು. ಆಗ ಸ್ವಲ್ಪ ದೂರದಲ್ಲಿ ರೈಲ್ವೆ ಹಳಿಗೂ ಇಬ್ಬರು ಹೋಗಿದ್ದಾರೆ. ವಿಡಿಯೋ ಮಾಡಲೆಂದು ಹಳಿ ಮೇಲೆ ಪ್ರಕಾಶ್ ಮೊಬೈಲ್ ಸೆಟ್ ಮಾಡುತ್ತಿದ್ದ. ಆದರೆ, ಅಷ್ಟರಲ್ಲೇ ಹಿಂಬದಿಯಿಂದ ವೇಗವಾಗಿ ರೈಲು ಬಂದಿದ್ದು, ಆತ ಗಮನಿಸಿಲ್ಲ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ನೂರು ಮೀಟರ್ ದೂರ ಬಿದ್ದಿದ್ದ ಶವ: ಘಟನೆ ಕುರಿತು ಮಾಹಿತಿ ಪಡೆದ ತಕ್ಷಣ ಸಚಿನ್ ಠಾಣೆ ಪೊಲೀಸ್ ಹಾಗೂ ರೈಲ್ವೆ ಪೊಲೀಸರ ತಂಡ ಸ್ಥಳಕ್ಕೆ ದೌಡಾಯಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ. ಸಹೋದರ ಅನಿಲ್ ಸುನಾರ್ ದೂರು ದಾಖಲಿಸಿದ್ದು, ರೈಲು ಡಿಕ್ಕಿ ಹೊಡೆದ ರಭಸಕ್ಕೆ ಶವ ನೂರು ಮೀಟರ್ ದೂರದಲ್ಲಿ ಬಿದ್ದಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಥಾಯ್ಲೆಂಡ್‌ನಿಂದ ಕಳ್ಳ ಮಾರ್ಗದಲ್ಲಿ ಮಲೇಷ್ಯಾ ತಲುಪಿಸಿದ ವಂಚಕ; ವೀಸಾ ಇಲ್ಲದೆ ಕೇರಳ ಯುವಕರ ಸಂಕಷ್ಟ