ಗಾಜಿಯಾಬಾದ್: ಸ್ಮಶಾನದ ಕಾಂಪೌಂಡ್ ಕುಸಿದು ದುರಂತ ಸಾವಿಗೀಡಾದ 25 ಜನರ ಕುಟುಂಬಕ್ಕೆ ಉತ್ತರ ಪ್ರದೇಶ ಸರ್ಕಾರ ತಲಾ 10 ಲಕ್ಷ ಪರಿಹಾರ ಘೋಷಿಸಿದೆ.
ಇನ್ನು ಘಟನೆ ಬಳಿಕ ಪರಾರಿಯಾಗಿದ್ದ ಆರೋಪಿ ಗುತ್ತಿಗೆದಾರನನ್ನು ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿದ್ದ ಅಜಯ್ ತ್ಯಾಗಿ ಎಂಬಾತನನ್ನು ಸತತ ಒಂದು ದಿನದ ಶೋಧದ ನಂತರ ಮುರಾದ್‌ನಗರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
''ನಾವು ದುರಂತಕ್ಕೆ ಕಾರಣರಾದ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದೇವೆ. ಅವರ ಹೇಳಿಕೆಗಳನ್ನು ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ" ಎಂದು ಗಾಜಿಯಾಬಾದ್‌ನ ಎಸ್‌ಎಸ್‌ಪಿ ಕಲಾನಿಧಿ ನೈಥಾನಿ ಮಾಹಿನಿ ನೀಡಿದ್ದಾರೆ.
ಮೃತ ಹಣ್ಣು ಮಾರಾಟಗಾರನೊಬ್ಬನ ಅಂತಿಮ ವಿಧಿ-ವಿಧಾನಗಳಲ್ಲಿ ಭಾಗಿಯಾಗಲು ಭಾನುವಾರ ಬೆಳಗ್ಗೆ ಸ್ಮಶಾನಕ್ಕೆ ಬಂದಿದ್ದ ಸುಮಾರು 50 ಜನ ಮಳೆ ಹಿನ್ನೆಲೆ ಅಲ್ಲಿನ ಹೊಸ ಕಾಂಪೌಂಡ್ವೊಂದರ ಬಳಿ ಆಶ್ರಯ ಪಡೆದಿದ್ದರು. ಈ ವೇಳೆ ಏಕಾಏಕಿ ಅವರ ಮೇಲೆಯೇ ಮೇಲ್ಛಾವಣಿ ಕುಸಿದು ಬಿದ್ದ ಕಾರಣ ಸುಮಾರು 25 ಮಂದಿ ಸಾವನ್ನಪ್ಪಿ, 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಗಾಯಾಳುಗಳಲ್ಲಿ 8 ಜನರ ಸ್ಥಿತಿ ಚಿಂತಾಜನಕವಾಗಿದೆ.
ಇನ್ನು ಘಟನೆ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ತ್ಯಾಗಿ ಮತ್ತು ಮುರಾದ್‌ನಗರ ಮಹಾನಗರ ಪಾಲಿಕೆಯ ಅಧಿಕಾರಿಗಳು ಸೇರಿದಂತೆ ನಾಲ್ವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಕಾರ್ಯನಿರ್ವಾಹಕ ಅಧಿಕಾರಿ ನಿಹಾರಿಕಾ ಸಿಂಗ್, ಜೂನಿಯರ್ ಎಂಜಿನಿಯರ್ ಚಂದ್ರ ಪಾಲ್, ಮತ್ತು ಮೇಲ್ವಿಚಾರಕ ಆಶಿಶ್ ಸೇರಿದಂತೆ ಅಧಿಕಾರಿಗಳನ್ನು ಸೋಮವಾರ ಬೆಳಿಗ್ಗೆ ಬಂಧಿಸಲಾಗಿದ್ದರೆ, ತ್ಯಾಗಿ ತಲೆಮರೆಸಿಕೊಂಡಿದ್ದ. ಇದೀಗ ಆತನನ್ನು ಬಂಧಿಸಲಾಗಿದೆ. ಇನ್ನು ಬಂಧಿತರ ವಿರುದ್ಧ ಸೆ. 304, 337, 338, 409 ಮತ್ತು ಐಪಿಸಿಯ 427 ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:ಟೀಮ್ ಇಂಡಿಯಾಗೆ ಮತ್ತೊಂದು ಶಾಕ್: ಟೆಸ್ಟ್ ಸರಣಿಯಿಂದ ಕೆ.ಎಲ್.ರಾಹುಲ್ ಔಟ್