ಹೈದರಾಬಾದ್: ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಗ್ರಾಹಕ ತಂತ್ರಜ್ಞಾನ ಕ್ಷೇತ್ರದ ಬಗ್ಗೆ ಹೊಸದಾಗಿ ಆಸಕ್ತಿ ಕಂಡು ಬಂದಿದೆ. ತಯಾರಕರು ಫ್ಲ್ಯಾಗ್ ಶಿಪ್ ಮಟ್ಟದ ಚಿಪ್ ಸೆಟ್ ಗಳನ್ನು ಹೊಂದಿರುವ ಆಂಡ್ರಾಯ್ಡ್ ಟ್ಯಾಬ್ಲೆಟ್ಗಳನ್ನು ಈಗ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗುತ್ತಿದ್ದಾರೆ. ಆದರೆ, ಸಾಫ್ಟ್ವೇರ್ನ ಕಡಿಮೆ ಸಾಮರ್ಥ್ಯದಿಂದ ಈ ಸಾಧನಗಳನ್ನು ತಮ್ಮ ಗರಿಷ್ಠ ಮಟ್ಟದಲ್ಲಿ ಗ್ರಾಹಕರು ಬಳಸಲು ಸಾಧ್ಯವಾಗುತ್ತಿಲ್ಲ. ಶಿಯೋಮಿ ಕನಿಷ್ಠ ಪಕ್ಷ ಗೇಮಿಂಗ್ ವಿಚಾರದಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ.
ಚೀನಾದ ಎಲೆಕ್ಟ್ರಾನಿಕ್ಸ್ ಕಂಪನಿ ಶಿಯೋಮಿ ವಿನ್ ಪ್ಲೇ ಹೆಸರಿನ ಎಂಜಿನ್ ಅನ್ನು ಪರಿಚಯಿಸಿದೆ. ಇದು ಹೈಪರ್ ಓಎಸ್ ಮತ್ತು ವಿಂಡೋಸ್ ಗೇಮಿಂಗ್ ನಡುವಿನ ಕ್ರಾಸ್-ಪ್ಲಾಟ್ ಫಾರ್ಮ್ ಹೊಂದಾಣಿಕೆ ಸಂಯೋಜಿಸುವ ಸಿಸ್ಟಮ್ - ಲೆವೆಲ್ ವೈಶಿಷ್ಟ್ಯವಾಗಿದೆ. ಸರಳವಾಗಿ ಹೇಳುವುದಾದರೆ, ಇದು ಬಳಕೆದಾರರಿಗೆ ಆಂಡ್ರಾಯ್ಡ್ ಟ್ಯಾಬ್ಲೆಟ್ನಲ್ಲಿ ಪಿಸಿ ಗೇಮ್ಗಳನ್ನು ಆಡಲು ಅನುವು ಮಾಡಿಕೊಡುತ್ತದೆ. ಶಿಯೋಮಿ ಪ್ಯಾಡ್ 6ಎಸ್ ಪ್ರೊ 12.4 ಗಾಗಿ ಈ ವೈಶಿಷ್ಟ್ಯವನ್ನು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ.
ಸಾಫ್ಟ್ವೇರ್ ವಿಭಾಗದ ನಿರ್ದೇಶಕ ಜಾಂಗ್ ಗುವೊಕ್ವಾನ್ ಹೇಳುವುದಿಷ್ಟು:ಈ ಬಗ್ಗೆ ಮಾತನಾಡಿದ ಶಿಯೋಮಿ ಮೊಬೈಲ್ ಸಿಸ್ಟಮ್ ಸಾಫ್ಟ್ವೇರ್ ವಿಭಾಗದ ನಿರ್ದೇಶಕ ಜಾಂಗ್ ಗುವೊಕ್ವಾನ್, ವಿನ್ ಪ್ಲೇ ಎಂಜಿನ್ ಟ್ಯಾಬ್ಲೆಟ್ನಲ್ಲಿ ವರ್ಚುವಲ್ ವಾತಾವರಣವನ್ನು ಸೃಷ್ಟಿಸುತ್ತದೆ, ಇದು ಪಿಸಿ ಗೇಮ್ಗಲನ್ನು ಬೆಂಬಲಿಸುತ್ತದೆ, ಜೊತೆಗೆ ಹೆಚ್ಚಿನ ಕಾರ್ಯಕ್ಷಮತೆ ಮತ್ತು ಸ್ಥಿರತೆಯನ್ನು ನೀಡುತ್ತದೆ. ಟ್ಯಾಬ್ಲೆಟ್ನಲ್ಲಿ ಗೇಮಿಂಗ್ ಅನುಭವವನ್ನು ಆನಂದಿಸಲು ಬಳಕೆದಾರರು ಸ್ಟೀಮ್ ನಂತಹ ಪ್ಲಾಟ್ ಫಾರ್ಮ್ಗಳಿಂದ ಗೇಮ್ಗಳನ್ನು ಆಡಬಹುದು ಅಥವಾ ನೇರವಾಗಿ ಡೌನ್ ಲೋಡ್ ಮಾಡಬಹುದು ಎಂದರು.
ಮೌಸ್, ಕೀಬೋರ್ಡ್ ಮತ್ತು ಕನ್ಸೋಲ್ ನಿಯಂತ್ರಕ ಸೇರಿದಂತೆ ವಿವಿಧ ಗೇಮಿಂಗ್ ಪೆರಿಫೆರಲ್ಗಳನ್ನು ಬೆಂಬಲಿಸುತ್ತದೆ ಎಂದು ವಿನ್ ಪ್ಲೇ ಎಂಜಿನ್ ಹೇಳಿಕೊಂಡಿದೆ. Xbox ನಿಯಂತ್ರಕಗಳು ಟ್ಯಾಬ್ಲೆಟ್ ನೊಂದಿಗೆ ಹ್ಯಾಪ್ಟಿಕ್ಸ್ ಅನ್ನು ಸಹ ಬೆಂಬಲಿಸುತ್ತವೆ. ಏತನ್ಮಧ್ಯೆ, ವಿನ್ ಪ್ಲೇ ಎಂಜಿನ್ ಬಳಸಿ ನಾಲ್ಕು ಜನರೊಂದಿಗೆ ಮಲ್ಟಿಪ್ಲೇಯರ್ ಗೇಮಿಂಗ್ ಅನ್ನು ಸಹ ಆಡಬಹುದು.
ವಿನ್ ಪ್ಲೇ ಮೂಲಕ ಜಿಪಿಯು ಕಾರ್ಯಕ್ಷಮತೆ ಹೆಚ್ಚಿಸುವ ಪ್ರಯತ್ನ:ಆಂಡ್ರಾಯ್ಡ್ ನಲ್ಲಿ ವಿಂಡೋಸ್ ಗೇಮ್ಗಳನ್ನು ಆಪ್ಟಿಮೈಸ್ ಮಾಡುವುದು ಎಂದರೆ ಒಂದಿಷ್ಟು ಸಮಸ್ಯೆಗಳು ಖಂಡಿತವಾಗಿಯೂ ಉಳಿದುಕೊಂಡಿರುತ್ತವೆ. ಆದಾಗ್ಯೂ, ಶಿಯೋಮಿ ತನ್ನ ಆಂತರಿಕ ಪರೀಕ್ಷೆಗಳ ಪ್ರಕಾರ ವಿನ್ ಪ್ಲೇ ಮೂಲಕ ಜಿಪಿಯು ಕಾರ್ಯಕ್ಷಮತೆಯ ನಷ್ಟವು ಶೇಕಡಾ 2.9 ರಷ್ಟು ಮಾತ್ರ ಆಗಿರುತ್ತದೆ ಎಂದು ಹೇಳಿಕೊಂಡಿದೆ.