ಕರ್ನಾಟಕ

karnataka

ETV Bharat / technology

ಜಿಮೇಲ್​ಗೆ ಪೈಪೋಟಿ: XMail ಆರಂಭಿಸುವುದಾಗಿ ಎಲೋನ್ ಮಸ್ಕ್ ಘೋಷಣೆ - ಇಮೇಲ್

ಹೊಸ ಇಮೇಲ್ ಸೇವೆ ಆರಂಭಿಸುವುದಾಗಿ ಎಲೋನ್ ಮಸ್ಕ್ ಘೋಷಿಸಿದ್ದಾರೆ.

Elon Musk says Gmail alternative Xmail is coming soon
Elon Musk says Gmail alternative Xmail is coming soon

By ETV Bharat Karnataka Team

Published : Feb 23, 2024, 5:21 PM IST

ನವದೆಹಲಿ: ಶೀಘ್ರದಲ್ಲೇ ಎಕ್ಸ್​ ಮೇಲ್ (XMail) ಹೆಸರಿನಲ್ಲಿ ಇಮೇಲ್ ಸೇವೆ ಆರಂಭಿಸುವುದಾಗಿ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಸಿಇಒ ಎಲೋನ್ ಮಸ್ಕ್ ಶುಕ್ರವಾರ ಬಹಿರಂಗಪಡಿಸಿದ್ದಾರೆ. ಈ ಮೂಲಕ ಸತ್ಯ ನಾದೆಲ್ಲಾ ನೇತೃತ್ವದ ಗೂಗಲ್​​ಗೆ ನೇರ ಪೈಪೋಟಿ ಒಡ್ಡಲು ಮಸ್ಕ್ ಸಜ್ಜಾಗಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್​ ಪ್ಲಾಟ್​ಫಾರ್ಮ್ ಅಡಿಯಲ್ಲಿ ಎಕ್ಸ್​ ಮೇಲ್ ಆರಂಭಿಸುವುದಾಗಿ ಮತ್ತು ಇದು ಗೂಗಲ್​​ಗೆ ಪರ್ಯಾಯವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

ಎಕ್ಸ್ ನ ಎಂಜಿನಿಯರಿಂಗ್ ಮತ್ತು ಸೆಕ್ಯೂರಿಟಿ ತಂಡದ ಸದಸ್ಯ ನೇಟ್ ಮೆಕ್ ಗ್ರೇಡಿ, ಎಕ್ಸ್ ಮೇಲ್ ಅನ್ನು ಯಾವಾಗ ಪ್ರಾರಂಭಿಸಲಾಗುವುದು ಎಂದು ಎಕ್ಸ್​ನಲ್ಲಿ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮಸ್ಕ್, "ಬರಲಿದೆ" ಎಂದು ಹೇಳಿದ್ದಾರೆ. ಗೂಗಲ್ ತನ್ನ ಜಿಮೇಲ್ ಸೇವೆಯನ್ನು ಮುಚ್ಚಲಿದೆ ಎಂಬ ವದಂತಿಗಳ ಮಧ್ಯೆ ಮಸ್ಕ್​ ತಮ್ಮದೇ ಇಮೇಲ್ ಸೇವೆ ಆರಂಭಿಸುವುದಾಗಿ ಹೇಳಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.

ಜಿಮೇಲ್ ಸ್ಪಷ್ಟೀಕರಣ: ಜಿಮೇಲ್​ ಸ್ಥಗಿತಗೊಳ್ಳಲಿದೆ ಎಂದು ಸೂಚಿಸುವ ನಕಲಿ ಸ್ಕ್ರೀನ್​ಶಾಟ್​ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ನಂತರ ಬಳಕೆದಾರರಲ್ಲಿ ಈ ಬಗ್ಗೆ ಆತಂಕ ಉಂಟಾಗಿತ್ತು. ಆದರೆ ಜಿಮೇಲ್ ಮುಚ್ಚುವುದಿಲ್ಲ, ಅದರ ಸೇವೆಗಳು ಎಂದಿನಂತೆ ಮುಂದುವರಿಯಲಿವೆ ಎಂದು ಗೂಗಲ್ ಸ್ಪಷ್ಟೀಕರಣ ನೀಡಿದೆ.

ಈ ವರ್ಷದಿಂದ ಜಿಮೇಲ್​ನ ಎಚ್​ಟಿಎಂಎಲ್​ ವರ್ಷನ್ ಸ್ಥಗಿತಗೊಳ್ಳಲಿದೆ. ಜನವರಿ 2024 ರ ನಂತರ ಜಿಮೇಲ್​ ಎಲ್ಲ ಬಳಕೆದಾರರಿಗೆ ಸ್ಟ್ಯಾಂಡರ್ಡ್​ ವ್ಯೂನಲ್ಲಿಯೇ ಕಾಣಿಸಲಿದೆ. 2024ರಲ್ಲಿ ಎಚ್​​ಟಿಎಂಎಲ್ ವರ್ಷನ್ ಸ್ಥಗಿತಗೊಳಿಸುವುದಾಗಿ 2023ರಲ್ಲಿಯೇ ಗೂಗಲ್ ಹೇಳಿತ್ತು. ಎಚ್​ಟಿಎಂಎಲ್ ವಿಧಾನದಲ್ಲಿ ನೀವು ಜಿಮೇಲ್ ಅನ್ನು ಅತ್ಯಂತ ಸರಳವಾಗಿ ಬಳಸಬಹುದಿತ್ತು. ಇಂಟರ್​ನೆಟ್​ ನಿಧಾನವಾಗಿದ್ದರೂ ಎಚ್​ಟಿಎಂಎಲ್ ವಿಧಾನದಲ್ಲಿ ಜಿಮೇಲ್​ ತೆರೆದುಕೊಳ್ಳುತ್ತಿತ್ತು.

ಚಾಟ್, ಸ್ಪೆಲ್ ಚೆಕ್ಕರ್, ಕೀಬೋರ್ಡ್ ಶಾರ್ಟ್ ಕಟ್​ಗಳು, ರಿಚ್ ಫಾರ್ಮ್ಯಾಟಿಂಗ್ ಮತ್ತು ಸರ್ಚ್​ ಫಿಲ್ಟರ್​ಗಳಂಥ ಗೂಗಲ್​ನ ಅನೇಕ ವೈಶಿಷ್ಟ್ಯಗಳು ಎಚ್​ಟಿಎಂಎಲ್​ ನಲ್ಲಿ ಲಭ್ಯವಿರಲಿಲ್ಲ. ಸದ್ಯ ಗೂಗಲ್​ ಎಚ್​ಟಿಎಂಎಲ್​ ಮೋಡ್​ ಅನ್ನು ಶಾಶ್ವತವಾಗಿ ನಿಲ್ಲಿಸುತ್ತಿದೆ. ಆದರೆ ನಿಧಾನಗತಿಯ ಇಂಟರ್​ನೆಟ್​ ನಲ್ಲಿ ಬಳಸಬಹುದಾದ ಜಿಮೇಲ್​ನ ಹೊಸ ಆವೃತ್ತಿಯನ್ನು ಗೂಗಲ್ ಬಿಡುಗಡೆ ಮಾಡಲಿದೆಯಾ ಎಂಬುದು ಖಚಿತವಾಗಿಲ್ಲ. ಏತನ್ಮಧ್ಯೆ ತನ್ನ ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಗೂಗಲ್ ನಿರಂತರವಾಗಿ ಜಿಮೇಲ್​ಗೆ ಹೊಸ ಅಪ್ಡೇಟ್​ಗಳನ್ನು ಬಿಡುಗಡೆ ಮಾಡುತ್ತಿದೆ. ಕೆಲವು ವಾರಗಳ ಹಿಂದೆ ಕಂಪನಿಯು ಹೊಸ ಸ್ಪ್ಯಾಮ್ ಪತ್ತೆ ವ್ಯವಸ್ಥೆಯನ್ನು ಜಾರಿಗೊಳಿಸಿದೆ.

ಇದನ್ನೂ ಓದಿ : ಜಿಮೇಲ್​ ಮುಚ್ಚಲ್ಲ, ಎಂದಿನಂತೆ ಕೆಲಸ ಮಾಡುತ್ತೆ: ಗೂಗಲ್ ಸ್ಪಷ್ಟೀಕರಣ

ABOUT THE AUTHOR

...view details