ಬೆಂಗಳೂರು : ವಾಡಿಕೆಗಿಂತ ಮುಂಚಿತವಾಗಿಯೇ ಜೂನ್ 2 ರಂದು ರಾಜ್ಯಕ್ಕೆ ಮುಂಗಾರು ಮಳೆ ಎಂಟ್ರಿ ಕೊಡುತ್ತಿದ್ದು, ಈ ಹಿನ್ನೆಲೆ 11 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಲ್ಲೋ ಅಲರ್ಟ್ ನೀಡಿದೆ. ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಿಗೆ ಜೂನ್ 1 ಮತ್ತು 2 ರಂದು ಎಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹೇಳಿದೆ.
ಮುಂದಿನ 24 ಗಂಟೆಗಳ ಹವಾಮಾನ ಮುನ್ಸೂಚನೆ : ಮುಂದಿನ 24 ಗಂಟೆಗಳ ಕಾಲ ಮೇಲ್ಮೈ ಮಾರುತಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, 40 ರಿಂದ 50 ಕಿಲೋಮೀಟರ್ ವೇಗವಾಗಿ ಗಾಳಿ ಬೀಸಲಿದೆ. ಉತ್ತರ ಕನ್ನಡ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಹಗುರ ಮಳೆಯಾಗಲಿದೆ. ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಒಂದೆರಡು ಗುಡುಗು ಸಹಿತ ಮಳೆಯಾಗಲಿದೆ ಎಂದು ಮಾಹಿತಿ ನೀಡಿದೆ.
ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವೆಯಿರುವ ಸಾಧ್ಯತೆಯಿದೆ. ಮುಂದಿನ 72 ಗಂಟೆಗಳ ಕಾಲ ರಾಜ್ಯದ ಗರಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆಯಿಲ್ಲ. ನಂತರ ರಾಜ್ಯಾದ್ಯಂತ 2 ರಿಂದ 3 ಡಿಗ್ರಿಯಷ್ಟು ಕ್ರಮೇಣ ಕುಸಿಯಲಿದೆ ಎಂದಿದೆ.