ಬೆಂಗಳೂರು: ರಾಜ್ಯ ಸರ್ಕಾರ ರಾಮ ಮತ್ತು ಹನುಮ ಭಕ್ತರ ವಿರುದ್ಧ ಏಕಪಕ್ಷೀಯವಾಗಿ ವರ್ತಿಸಿ ಹತ್ತಿಕ್ಕುತ್ತಿದೆ. ಕೇಸರಿ ಬಣ್ಣ, ಹನುಮನ ಧ್ವಜ ನಿಮಗೆ ಸಹಿಸಲಾಗದಿದ್ದರೆ ನಮ್ಮ ಮೇಲೆ ಲಾಠಿ ಚಾರ್ಜ್ ಮಾಡಿ, ಗೋಲಿ ಬಾರ್ ಮಾಡಿ, ಸುಳ್ಳು ಕೇಸು ಖಾಕಿ ಬಂಧಿಸಿ. ಆದರೆ ನಾವು ಹಿಂದೂಗಳ ರಕ್ಷಣೆ ಮಾಡಲು ಸಿದ್ಧ. ನಿಮ್ಮ ಹಿಂದೂ ದ್ವೇಷ, ದೊಡ್ಡದೋ ನಮ್ಮ ಹನುಮ ಭಕ್ತಿ ದೊಡ್ಡದೋ ನೋಡಿಯೇ ಬಿಡೋಣ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸವಾಲೆಸೆದರು.
ಮಂಡ್ಯದಿಂದ ವಾಪಸಾದ ನಂತರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆರಗೋಡು ಗ್ರಾಮದಲ್ಲಿ ಮೂರು ತಿಂಗಳ ಮೊದಲೇ ಹನುಮ ಧ್ವಜ ಹಾರಿಸಲು ಸ್ಥಳೀಯ ರಾಮಸೇವಾ ಮಂಡಳಿ ಸ್ಥಳೀಯ ಪಂಚಾಯತಿ ಅನುಮತಿ ಪಡೆದುಕೊಂಡಿದೆ. ಸ್ವಂತ ಖರ್ಚಿನಲ್ಲಿ ಬೃಹತ್ ಕಂಬ ಸ್ಥಾಪಿಸಿ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಟಾಪನೆ ದಿನ ಹನುಮಧ್ವಜ ಹಾರಿಸಿದ್ದಾರೆ. ದೇವಾಲಯದ ಮುಂಭಾಗದಲ್ಲಿ ಧ್ವಜ ಹಾರಿಸಲಾಗಿದೆ. ಇದರಿಂದ ಯಾರಿಗೂ ತೊಂದರೆ ಆಗುತ್ತಿರಲಿಲ್ಲ.
ಅಂದಿನಿಂದಲೂ ಹನುಮಧ್ವಜ ಹಾರಾಡುತ್ತಿತ್ತು. ಹೀಗಿರುವಾಗ ಇಂದು (ನಿನ್ನೆ) ಏಕಾಏಕಿ ಪೊಲೀಸರು ಗ್ರಾಮಕ್ಕೆ ಧಾವಿಸಿ ಹನುಮಧ್ವಜ ಇಳಿಸಿ ಮಧ್ಯಾಹ್ನ 3 ಗಂಟೆಗೆ ರಾಷ್ಟ್ರಧ್ವಜ ಹಾರಿಸಿದ್ದಾರೆ. ಇದು ಆ ಗ್ರಾಮದ ಜನರ ಭಾವನೆಗಳಿಗೆ ವಿರುದ್ಧವಾಗಿದೆ. ಅವರ ವರ್ತನೆಯ ವಿರುದ್ಧ ಪ್ರತಿಭಟನೆ ನಡೆಸಿದ ಗ್ರಾಮಸ್ಥರ ವಿರುದ್ಧ ಪೊಲೀಸರು ಲಾಠಿಚಾರ್ಜ್ ಮಾಡಿ ದೌರ್ಜನ್ಯ ಮೆರೆದಿದ್ದಾರೆ. ಇದು ಗೂಂಡಾ ವರ್ತನೆ.
ಒಂದು ವೇಳೆ ಪೊಲೀಸರಿಗೆ ಗ್ರಾಮದಲ್ಲಿ ರಾಷ್ಟ್ರಧ್ವಜ ಹಾರಿಸಬೇಕು ಎಂಬ ಉದ್ದೇಶ ಇದ್ದಿದ್ದರೆ ಅವರು ಸರಕಾರದ ವೆಚ್ಚದಲ್ಲಿ ಕಂಬ ಸ್ಥಾಪಿಸಿ ಹಾರಿಸಬಹುದಿತ್ತು. ಕಾನೂನುಬಾಹಿರವಾಗಿ ರಾಮ ಸೇವಾ ಮಂಡಳಿಯವರು ಅನುಮತಿ ಪಡೆದು ಹಾರಿಸಿದ್ದ ಹನುಮ ಧ್ವಜ ಇಳಿಸಿರುವುದು ಯಾವ ನ್ಯಾಯ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.