ಬೆಂಗಳೂರು: ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಮತ್ತು ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ವಿರುದ್ಧ ಹೈಕಮಾಂಡ್ ನಾಯಕರ ಜೊತೆ ಚರ್ಚಿಸಿ ಕ್ರಮ ಜರುಗಿಸಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಪ್ ನೀಡಿದ್ದರೂ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸದೇ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಅಡ್ಡ ಮತದಾನ ಮಾಡಿದ್ದಾರೆ. ಶಾಸಕ ಶಿವರಾಮ ಹೆಬ್ಬಾರ್ ಮತದಾನಕ್ಕೆ ಗೈರಾಗಿ ವಿಪ್ ಉಲ್ಲಂಘಿಸಿದ್ದಾರೆ. ಈ ಸಂಬಂಧ ನಮ್ಮೆಲ್ಲ ಪಕ್ಷದ ಮುಖಂಡರು ಕುಳಿತು ಚರ್ಚೆ ಮಾಡಿದ್ದೇವೆ. ವಕೀಲರ ಜೊತೆಗೂ ಚರ್ಚಿಸಿದ್ದೇವೆ. ಕ್ರಮಕ್ಕೆ ಇನ್ನೂ ಸಾಕಷ್ಟು ಸಮಯವಿದೆ ಎಂದರು.
ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಸಾ ಭಾಂಡಗೆ 47 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ. ಬಿಜೆಪಿ ಪರವಾಗಿ ಅವರಿಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ರಾಜ್ಯಸಭೆಯಲ್ಲಿ ಕರ್ನಾಟಕದ ಪರವಾಗಿ ಧ್ವನಿ ಎತ್ತುವ ಮೂಲಕ ಕನ್ನಡನಾಡಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಅವರೂ ಕೂಡ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.