ಹುಬ್ಬಳ್ಳಿ: ಮುಡಾ ಹಗರಣವನ್ನು ಸಿಬಿಐಗೆ ಕೊಟ್ಟರೆ ಮಾತ್ರ ನಿಷ್ಪಕ್ಷಪಾತ ತನಿಖೆ ಸಾಧ್ಯ. ಮುಡಾದಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಇದು ಸಿದ್ದರಾಮಯ್ಯ ಗಮನದಲ್ಲಿ ಇದ್ದೇ ಆಗಿರುವ ಬಹುದೊಡ್ಡ ಹಗರಣ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2017ರಲ್ಲಿ ಈ ನಿರ್ಣಯಗಳಾಗಿವೆ. ಆದರೆ, 2014 ರಿಂದ 2018 ರಲ್ಲಿ ಇದರ ಪ್ರಮುಖ ಬೆಳವಣಿಗೆ ನಡೆದಿದೆ. ಏನೂ ಮಾಡಿಲ್ಲ ಎಂದಾದರೆ ಜಿಲ್ಲಾಧಿಕಾರಿಯನ್ನೇಕೆ ವರ್ಗಾವಣೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ಮತ್ತು ಅವರ ಮಗನ ಅನುಮತಿ ಇಲ್ಲದೇ ಇದು ನಡೆಯಲು ಸಾಧ್ಯವಿಲ್ಲ. ಇದು ಸ್ವಂತಕ್ಕೆ ಲಾಭ ಮಾಡಿಕೊಳ್ಳಲು ಮಾಡಿರುವ ಬಹುದೊಡ್ಡ ಹಗರಣ. ಇದರ ತನಿಖೆಯ ಹೊಣೆಯನ್ನು ಸಿಬಿಐಗೆ ಕೊಡಬೇಕು. ಸಿದ್ದರಾಮಯ್ಯ ಅವರು ನಾನು ಲೋಹಿಯಾವಾದಿ, ಸಮಾಜವಾದಿ ಅಂಥ ಹೇಳಿಕೊಳ್ಳಲು ಅರ್ಹರಲ್ಲ. ಮುಡಾ ಮತ್ತು ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣದಲ್ಲಿ ನೇರವಾಗಿ ಸಿಎಂ ಭಾಗಿಯಾಗಿದ್ದಾರೆ ಎನ್ನುವುದು ನನ್ನ ಬಲವಾದ ಆರೋಪ ಎಂದರು.
ವಾಲ್ಮೀಕಿ ಹಗರಣ ಮುಚ್ಚಿ ಹಾಕಲು ಎಸ್ಐಟಿಯವರು ಕೆಲವರನ್ನು ಬಂಧಿಸಿದ್ದಾರೆ. ಇಷ್ಟು ದಿನ ನಾಗೇಂದ್ರ ತಪ್ಪಿಸಿಕೊಳ್ಳಲು ಅವಕಾಶ ಕೊಟ್ಟು, ಈಗ ನೋಟಿಸ್ ಕೊಟ್ಟಿದ್ದಾರೆ. ಎಲ್ಲವನ್ನೂ ಮುಚ್ಚಿ ಹಾಕಲು ಷಡ್ಯಂತ್ರ ನಡೆದಿದೆ. ಸಿದ್ದರಾಮಯ್ಯ ಸರ್ಕಾರ ಭ್ರಷ್ಟ ಸರ್ಕಾರ. ಭ್ರಷ್ಟಾಚಾರ ನಡೆಸಲು ಹೊಸ ಹೊಸ ಮಾರ್ಗ ಕಂಡುಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ದಿವಾಳಿಯತ್ತ ಸಾಗುತ್ತಿದೆ. ಇದರಲ್ಲೂ ಭ್ರಷ್ಟಾಚಾರ ಹೇಗೆ ಮಾಡಬೇಕು ಅಂತ ಸಿಎಂಗೆ ಗೊತ್ತು. ಬಣವೆಗೆ ಬೆಂಕಿ ಹತ್ತಿದಾಗ ಅದರಲ್ಲಿ ಬೀಡಿ ಅಥವಾ ಸಿಗರೇಟ್ ಹೇಗೆ ಹಚ್ಚಬೇಕು ಎನ್ನುವುದು ಸಿದ್ದರಾಮಯ್ಯ ಚೆನ್ನಾಗಿ ಗೊತ್ತು ಎಂದು ಟೀಕಿಸಿದರು.