ಬಳ್ಳಾರಿ:ಕೌಟುಂಬಿಕ ಸಮಸ್ಯೆ ಹೇಳಿಕೊಂಡು ಬಂದ ಮಹಿಳೆಯೊಬ್ಬರನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದ ಮೇಲೆ ಇಬ್ಬರು ಪೊಲೀಸ್ ಸಿಬ್ಬಂದಿ ವಿರುದ್ಧ ಅತ್ಯಾಚಾರ ಮತ್ತು ವಂಚನೆ ಪ್ರಕರಣ ದಾಖಲಾಗಿದ್ದು, ಸೇವೆಯಿಂದ ಅಮಾನತು ಮಾಡಲಾಗಿದೆ.
ಕೌಲ್ ಬಜಾರ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಸೈಯದ್ ಇಮ್ರಾನ್ ಮತ್ತು ಬಳ್ಳಾರಿ ಸಂಚಾರ ಠಾಣೆಯ ಸಿಬ್ಬಂದಿ ಆಜಾದ್ ವಿರುದ್ಧ ಬಳ್ಳಾರಿಯ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಜಾದ್‌ನ ಬಂಧನವಾಗಿದ್ದು, ಇಮ್ರಾನ್ ಪರಾರಿಯಾಗಿದ್ದಾನೆ. ಇಬ್ಬರನ್ನೂ ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ತಿಳಿಸಿದ್ದಾರೆ.
ಪತಿಯ ಕಿರುಕುಳದಿಂದ ಬೇಸತ್ತ ಮಹಿಳೆ ದೂರು ದಾಖಲಿಸಲು ಎರಡು ವರ್ಷಗಳ ಹಿಂದೆ ಕೌಲ್ ಬಜಾರ್ ಠಾಣೆಗೆ ಹೋದಾಗ, ಸೈಯದ್ ಇಮ್ರಾನ್‌ನ ಪರಿಚಯವಾಗಿತ್ತು. ಮಹಿಳೆಯನ್ನು ಪತಿ ಮನೆಯಿಂದ ಹೊರಗೆ ಹಾಕಿದಾಗ ಇಮ್ರಾನ್ 15 ಸಾವಿರ ನೀಡಿ ಪ್ರತ್ಯೇಕ ಮನೆ ಮಾಡಿಕೊಳ್ಳಲು ನೆರವಾಗಿದ್ದ. ಬಳಿಕ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದರು.
ನಂಬಿಸಿ ಲೈಂಗಿಕವಾಗಿ ದುರ್ಬಳಕೆ ಆರೋಪ:ಈ ವೇಳೆ ಆರೋಪಿ ಇಮ್ರಾನ್ ತನ್ನನ್ನು ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ 5 ತಿಂಗಳ ಕಾಲ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ. ನಂತರ ಬಳ್ಳಾರಿ ಸಂಚಾರ ಠಾಣೆಯ ಸಿಬ್ಬಂದಿ ಆಜಾದ್ ಕೂಡ ನೊಂದ ಮಹಿಳೆಗೆ ಎರಡು ತಿಂಗಳೊಳಗೆ ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ಆತನೂ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಈ ಇಬ್ಬರು ಮದುವೆ ಮಾಡಿಕೊಳ್ಳದೇ ನಂಬಿಕೆ ದ್ರೋಹ ಎಸಗಿದ್ದಾರೆಂದು ಆರೋಪಿಸಿರುವ ಮಹಿಳೆ ನಗರದ ಮಹಿಳಾ ಠಾಣೆಗೆ ದೂರು ಸಲ್ಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಯಲಹಂಕ: ಗೆಳತಿಗೆ ಪದೇ ಪದೇ ಮೆಸೇಜ್, ವಿಡಿಯೋ ಕಾಲ್ ಮಾಡಿದ್ದಕ್ಕೆ ಬಿತ್ತು ಎರಡು ಹೆಣ