ಬಳ್ಳಾರಿ: ಮಗಳನ್ನು ಪ್ರೀತಿಸದಂತೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಪ್ರೀತಿಸುತ್ತಿದ್ದ ಯುವಕನನ್ನು ಹುಡುಗಿಯ ತಂದೆ ಹಾಗೂ ಅಣ್ಣ ಸೇರಿ ಕೊಲೆಗೈದ ಘಟನೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ಇದೀಗ ಪ್ರಕರಣದ ಆರೋಪಿಗಳಾದ ಡಿ.ಮಲ್ಲಯ್ಯ (45) ಹಾಗೂ ಸುರೇಶ್ (21) ಎಂಬಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ ಗೌಡ (22) ಕೊಲೆಯಾಗಿದ್ದರು.
ಎಸ್ಪಿ ಡಾ.ಶೋಭಾರಾಣಿ ಮಾತನಾಡಿ, "ಜ.7ರಂದು ಹಗರಿ ಬಳಿ ನದಿಯ ದಡದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ನಂತರದ ದಿನಗಳಲ್ಲಿ ಮಂಜುನಾಥ್ ಗೌಡ ಅವರ ಮೃತದೇಹ ಎಂದು ತಿಳಿಯಿತು. ತನಿಖೆ ಮಾಡಿದಾಗ ಕೊಲೆ ಕೇಸ್ ಎಂದು ಗೊತ್ತಾಗಿ, ಇದೀಗ ಮಲ್ಲಯ್ಯ ಹಾಗೂ ಸುರೇಶ್ ಎಂಬಿಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ" ಎಂದರು.
"ಮಂಜುನಾಥ ಗೌಡ ಓರ್ವ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಆದರೆ ಆಕೆಯ ಮನೆಯವರಿಗೆ ಇದು ಇಷ್ಟವಿರಲಿಲ್ಲ. ಮಗಳ ತಂಟೆಗೆ ಬರದಂತೆ ಬಹಳಷ್ಟು ಬಾರಿ ಎಚ್ಚರಿಸಿದ್ದರು. ಹೀಗಿದ್ದರೂ ಹುಡುಗ ಪ್ರೀತಿಯನ್ನು ಮುಂದುವರೆಸಿದ್ದ. ಇದೇ ದ್ವೇಷದಿಂದ ಮಂಜುನಾಥ್ಗೆ ಹುಡುಗಿಯ ಮೊಬೈಲ್ನಿಂದ ಕರೆ ಮಾಡಿ ಕರೆಸಿಕೊಂಡು, ಕೊಲೆ ಮಾಡಿದ್ದಾರೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.