ಲೋಕಸಭೆ ಚುನಾವಣೆಗೆ ಸ್ಪರ್ಧೆ ವಿಚಾರ: ನಾಳೆ ಮಠಾಧೀಶರ ಚಿಂತನಮಂಥನ ಸಭೆ- ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹುಬ್ಬಳ್ಳಿ:''ಪ್ರಸಕ್ತ ರಾಜಕೀಯ ವಿದ್ಯಮಾನಗಳ ನಡುವೆಯೇ ಖಾವಿಧಾರಿಯೊಬ್ಬರು ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಗಲಿದ್ದಾರೆ ಎಂಬ ಊಹಾಪೋಹಗಳು ಕೇಳಿಬಂದ ಹಿನ್ನೆಲೆಯಲ್ಲಿ ನಾಳೆ ಮೂರುಸಾವಿರ ಮಠದಲ್ಲಿ ಗುರುಸಿದ್ದರಾಜಯೋಗಿಂದ್ರ ಸ್ವಾಮೀಜಿ ನೇತೃತ್ವದಲ್ಲಿ ಮಠಾಧಿಪತಿಗಳ ಚಿಂತನ ಮಂಥನ ಸಭೆ ಆಯೋಜನೆ ಮಾಡಲಾಗಿದೆ'' ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಇಂದು (ಮಂಗಳವಾರ) ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ''ಈಗಾಗಲೇ ಸ್ವಾಮೀಜಿಗಳು ಧಾರವಾಡ ಲೋಕಸಭೆಗೆ ಸ್ಪರ್ಧೆ ಮಾಡುವ ವಿಚಾರ ಭಕ್ತರಲ್ಲಿ ಮೂಡಿದೆ. ಆದರೆ, ಸ್ವಾಮೀಜಿಗಳು ಏಕಮುಖ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಸರ್ವರ ಅಭಿಪ್ರಾಯ ಪಡೆದುಕೊಂಡು ನಮ್ಮ ನಿರ್ಧಾರವನ್ನು ತಿಳಿಸುವುದು ಅವಶ್ಯವಾಗಿದೆ. ಹೀಗಾಗಿ ನಾಡಿನ ಒಳಿತಿಗಾಗಿ ಮಠಾಧಿಪತಿಗಳ ಸಭೆಗೆ ಆಹ್ವಾನಿಸಲಾಗಿದೆ. ನೂರಾರು ಮಠಾಧಿಪತಿಗಳು ಸಭೆಗೆ ಹಾಜರಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಿದ್ದಾರೆ. ಇದರ ಮೇಲೆ ಚುನಾವಣೆಯಲ್ಲಿ ನಾವು ಸ್ಪರ್ಧೆ ಮಾಡಬೇಕೋ? ಅಥವಾ ಬೇಡವೋ? ಎಂಬ ಬಗ್ಗೆ ನಿರ್ಧಾರವನ್ನು ಪ್ರಕಟಿಸುತ್ತೇವೆ'' ಎಂದು ಸ್ಪಷ್ಟಪಡಿಸಿದರು.
''ಈ ಹಿಂದೆ ಸಮಸ್ಯೆಗಳು ಬಂದಾಗ ಸ್ವಾಮೀಜಿಗಳು ಧ್ವನಿ ಎತ್ತಿದ ಉದಾಹರಣೆಗಳಿವೆ. ಎಲ್ಲಾ ಮಠಾಧಿಪತಿಗಳು ಅಂತರಂಗದ ಕುರಿತು ಚರ್ಚೆ ಮಾಡಲಾಗುತ್ತದೆ. ಸಭೆಯ ನಂತರ ತೆಗೆದುಕೊಂಡ ತೀರ್ಮಾನಗಳ ಬಗ್ಗೆ ಮಾಧ್ಯಮಗಳಿಗೆ ತಿಳಿಸಲಾಗುತ್ತದೆ'' ಎಂದರು.
''ನಾನು ಪಕ್ಷೇತರರವಾಗಿ ಸ್ಪರ್ಧೆ ಮಾಡುವ ವಿಷಯ ಹೇಗೆ ಹುಟ್ಟಿತು ಎನ್ನುವುದು ಯಕ್ಷೆ ಪ್ರಶ್ನೆಯಾಗಿದೆ. ಊಹಾಪೋಹಗಳಿಗೆ ಏಕಕಾಲದಲ್ಲಿ ಉತ್ತರ ಕೊಡಲಿಕ್ಕೆ ಹೋಗುವುದಿಲ್ಲ. ನಾನು ಸ್ಪರ್ಧೆ ಮಾಡುವ ನಿಲುವುವನ್ನು ನಾಳೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಚುನಾವಣೆ ಸ್ಪರ್ಧೆ ಮಾಡುವ ಯೋಚನೆ ನನ್ನ ಮುಂದೆ ಇಲ್ಲ. ಮಾಧ್ಯಮಗಳ ಮೂಲಕ ರಾಜ್ಯದ ಎಲ್ಲಾ ಸ್ವಾಮೀಜಿಗಳಿಗೆ ಆಹ್ವಾನ ನೀಡುತ್ತಿದ್ದೇವೆ. ನಾಳೆ ಆಂತರಿಕ ಸಭೆ ನಡೆಸಲಾಗುತ್ತದೆ. ವೈಯಕ್ತಿಕ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಸ್ವಾಮೀಜಿಗಳಿಗೆ ಇರುವುದಿಲ್ಲ. ಹೀಗಾಗಿ ನಾಳೆ ಸಭೆ ನಡೆಸಲಾಗುತ್ತಿದೆ'' ಎಂದು ಹೇಳುವ ಮೂಲಕ ಪರೋಕ್ಷವಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ದಿಂಗಾಲೇಶ್ವರ ಶ್ರೀಗಳು ವ್ಯಕ್ತಪಡಿಸಿದರು.
ಇದನ್ನೂ ಓದಿ:ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಅಂತಿಮ: ಜಿ.ಟಿ. ದೇವೇಗೌಡ - JDS Core Committee meeting