ಬೆಂಗಳೂರು: ಪುಷ್ಪಗಿರಿ ಅರಣ್ಯ ವ್ಯಾಪ್ತಿಯ ಕುಮಾರಪರ್ವತಕ್ಕೆ ಜ.26ರಂದು ಒಂದೇ ದಿನ ಸಾವಿರಾರು ಚಾರಣಿಗರು ಭೇಟಿ ಕೊಟ್ಟ ಹಿನ್ನೆಲೆಯಲ್ಲಿ ಅರಣ್ಯದೊಳಗೆ ಜನಜಂಗುಳಿ ತಪ್ಪಿಸಲು ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆ ಇಲ್ಲದ ಚಾರಣ ಪಥಗಳಿಗೆ ಸರ್ಕಾರ ತಾತ್ಕಾಲಿಕ ನಿರ್ಬಂಧ ವಿಧಿಸಿದೆ.
ಈ ಸಂಬಂಧ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಅರಣ್ಯ ಕಾರ್ಯಪಡೆ ಮುಖ್ಯಸ್ಥರಿಗೆ ಸ್ಪಷ್ಟ ಸೂಚನೆ ನೀಡಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು, ಸಾವಿರಾರು ಸಂಖ್ಯೆಯಲ್ಲಿ ಚಾರಣಿಗರು ದಟ್ಟ ಅರಣ್ಯದ ಗಿರಿ ಪ್ರದೇಶಗಳಿಗೆ ಅದರಲ್ಲೂ ಅಮೂಲ್ಯ ಜೀವವೈವಿಧ್ಯದಿಂದ ಕೂಡಿದ ಪಶ್ಚಿಮಘಟ್ಟಕ್ಕೆ ಪ್ರತಿವಾರವೂ ಆಗಮಿಸಿದರೆ ಪರಿಸರಕ್ಕೂ ಹಾನಿಯಾಗುತ್ತದೆ ಮತ್ತು ಜಲ ಮೂಲಗಳೂ ಕಲುಷಿತಗೊಳ್ಳುತ್ತವೆ. ಹೀಗಾಗಿ ಇಂತಹ ಚಾರಣ ಪಥಕ್ಕೆ ಕಡಿವಾಣ ಹಾಕಿ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚಿಸಿದ್ದಾರೆ.
ಅರಣ್ಯ ಕಾರ್ಯಪಡೆ ಮುಖ್ಯಸ್ಥರಿಗೆ ಕಳುಹಿಸಿರುವ ಟಿಪ್ಪಣಿಯಲ್ಲಿ, ರಾಜ್ಯದ ಯುವಜನರಲ್ಲಿ ಇತ್ತೀಚೆಗೆ ಅರಣ್ಯವ್ಯಾಪ್ತಿಯ ಗಿರಿ ಶಿಖಿರಗಳಲ್ಲಿ ಚಾರಣ ಮಾಡುವ ಹವ್ಯಾಸ ಹೆಚ್ಚಾಗುತ್ತಿದ್ದು, ಇದು ವಾರಾಂತ್ಯದಲ್ಲಿ ಜನದಟ್ಟಣೆಗೆ ಕಾರಣವಾಗಿದೆ. ಹೀಗೆ ಬರುವವರು ಅರಣ್ಯದ ಅಂಚಿನ ಗ್ರಾಮಗಳಲ್ಲಿ ಮತ್ತು ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಮನಸೋ ಇಚ್ಛೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಬಾಟಲಿ, ತಟ್ಟೆ, ಉಳಿದ ಆಹಾರ ಪದಾರ್ಥ ಇತ್ಯಾದಿಗಳನ್ನು ಎಸೆಯುತ್ತಿದ್ದು, ಇದು ವನ್ಯಜೀವಿಗಳಿಗೆ ಅಪಾಯ ತರುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇಷ್ಟೊಂದು ಜನರನ್ನು ನಿಯಂತ್ರಿಸುವುದು ಮತ್ತು ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಬಿಡುವುದು ಅರಣ್ಯ ಇಲಾಖೆಯ ಸಿಬ್ಬಂದಿಗೂ ದೊಡ್ಡ ಸವಾಲಾಗುತ್ತದೆ ಎಂದಿದ್ದಾರೆ.